ಬೆಂಗಳೂರು: ಯುವತಿಯರ ಚಪ್ಪಲಿ, ದುಪ್ಪಟ್ಟ ಹಾಗೂ ಗೋಧಿ ಹಿಟ್ಟಿನ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಸೂಡಾನ್ ದೇಶದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೂಡಾನ್ ದೇಶದ ಇಬ್ಬರು ಮಹಿಳೆಯರು ಹಾಗೂ ಮುಂಬೈ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಭದ್ರತಾ ಸಿಬ್ಬಂದಿ, ಆರೋಪಿಗಳಿಂದ ಒಟ್ಟು 45 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಯರು ಬಳಸುವ ಹೇರ್‌ಕ್ಲಿಪ್ , ಹೇರ್‌ಬ್ಯಾಂಡ್ ಮತ್ತು ನೆಟ್ಟೆಡ್ ದುಪ್ಪಟ್ಟದಲ್ಲಿ ಚಿನ್ನದ ಗುಂಡುಗಳು ಹಾಗೂ ಚಪ್ಪಲಿಗಳ ಮೇಲ್ಭಾಗದಲ್ಲಿ ಚಿನ್ನದ ಪ್ಲೇಟ್‌ಗಳನ್ನು ಅಕ್ರಮವಾಗಿ ಮುಂಬೈ ಮೂಲದ ವ್ಯಕ್ತಿ ಸಾಗಾಟ ಮಾಡುತ್ತಿದ್ದ. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ದುಬೈನಿಂದ ಆರೋಪಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಷ್ಟರಲ್ಲಿ ಆತನ ಬಳಿ ಲಕ್ಷಾತಂರ ರೂ. ಮೌಲ್ಯದ ಚಿನ್ನ ಇರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಭದ್ರತಾ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಆತನ ಬ್ಯಾಗ್ ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಯುವತಿಯರ ಚಪ್ಪಲಿಗಳು, ಹೇರ್‌ಬ್ಯಾಂಡ್ ಸೇರಿ ಕೆಲ ವಸ್ತುಗಳು ಪತ್ತೆಯಾದವು. ಲೋಹ ಶೋಧಕ ಯಂತ್ರದಲ್ಲಿ ಇವುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅವುಗಳಲ್ಲಿ ಚಿನ್ನವಿರುವುದು ಪತ್ತೆಯಾಗಿದೆ.
ಮಹಿಳೆಯರ ಬಂಧನ
ಮತ್ತೂಂದು ಪ್ರಕರಣದಲ್ಲಿ ಗೋಧಿ ಹಿಟ್ಟಿನ ಪ್ಯಾಕೆಟ್‌ಗಳಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಸೂಡಾನ್ ದೇಶದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಇವರಿಂದ 30 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಶನಿವಾರ ದುಬೈಗೆ ಬಂದಿಳಿದಿದ್ದು, ಅಲ್ಲಿಂದ ಹತ್ತಾರು ಗೋಧಿ ಹಿಟ್ಟಿನ ಪ್ಯಾಕೆಟ್ ಗಳನ್ನು ಬೆಂಗಳೂರಿಗೆ ತರುತ್ತಿದ್ದರು. ಪ್ಯಾಕೆಟ್‌ನ ಮೇಲ್ಭಾಗ ಕವರ್‌ಗಳು ವಿವಿಧ ಮಾದರಿಯ ಲ್ಲಿದ್ದವು. ಇದರಿಂದ ಅನುಮಾನಗೊಂಡು ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ ನಾಲ್ಕೈದು ಪ್ಯಾಕೆಟ್‌ಗಳಲ್ಲಿ ಚಿನ್ನ ಇರುವುದು ಪತ್ತೆಯಾಯಿತು ಎಂದು ಅಧಿಕಾರಿ ವಿವರಿಸಿದರು.