ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್‌ನ ಸಂಗಮ್ ರಸ್ತೆಯ ಮನೆಯೊಂದರಲ್ಲಿ ನಡೆದ ತಾರಾ ಎಂಬುವವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊರಮಾವು ನಿವಾಸಿ ಗೋಪಿನಾಥ್ (35) ಬಂಧಿತ. ಆರೋಪಿ ಹಾಗೂ ತಾರಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿತ್ತು ಎನ್ನಲಾಗಿದೆ.
ಈ ಸಲುಗೆಯಿಂದಲೇ ಆರೋಪಿ ತಾರಾ ಬಳಿ ಕೆಲ ತಿಂಗಳ ಹಿಂದೆ 13 ಲಕ್ಷ ರೂ. ಸಾಲ ಪಡೆದಿದ್ದ. ಇದನ್ನು ಸಮಯಕ್ಕೆ ಸರಿಯಾಗಿ ತೀರಿಸಲಾಗದೆ ತಾರಾ ಅವರ ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ ಎಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಿಳಿಸಿದ್ದಾರೆ.
ಹೊರಮಾವು ನಿವಾಸಿ ಗೋಪಿನಾಥ್ ಮತ್ತು ಮೃತ ತಾರಾ ಅವರ ಪತಿ ಪ್ರಭುಕುಮಾರ್ ಸ್ನೇಹಿತರಾಗಿದ್ದು, ನಾಯಿ, ಪಾರಿವಾಳ ಮಾರಾಟ ವ್ಯವಹಾರ ನಡೆಸುತ್ತಿದ್ದ. ಈ ಮಧ್ಯೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ತಾರಾರಿಂದ ಒಮ್ಮೆ ತಾರಾರಿಂದ 3 ಲಕ್ಷ ರೂ. ಬಡ್ಡಿಗೆ ಸಾಲ ಪಡೆದುಕೊಂಡಿದ್ದ.
ನಂತರ ಅಪಾರ್ಟ್‌ಮೆಂಟ್ ಖರೀದಿಸಬೇಕು ಎಂದು ಮತ್ತೂಮ್ಮೆ 6 ಲಕ್ಷ ರೂ. ಹಣ ಪಡೆದಿದ್ದ. ಇದರೊಂದಿಗೆ ನಿಮಗೆ ಒಳ್ಳೆ ಕಾರು ಕೊಡಿಸುತ್ತೇನೆ ಎಂದು 4 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ, ಕಾರು ಕೂಡಿಸದೆ ನಿತ್ಯ ಇಲ್ಲದ ಸಬೂಬು ಹೇಳಿ ದಿನ ದೂಡುತ್ತಿದ್ದ. ಇತ್ತ ಈತನಿಗೆ ಕೊಟ್ಟ ಹಣ ವಾಪಸ್ ಬರುತ್ತದೆ ಎಂದು ನಂಬಿದ್ದ ತಾರಾ ಜ್ಯುವೆಲ್ಲರಿ ಶಾಪ್ ಹಾಗೂ
ಇತರೆಡೆ ಐದಾರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೆಲ ವಸ್ತುಗಳನ್ನು ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದ್ದರು. ಹೀಗಾಗಿ ನಿಗದಿತ ಸಮಯಕ್ಕೆ ಹಣ ಪಾವತಿಸುವಂತೆ ಜ್ಯುವೆಲ್ಲರಿ ಶಾಪ್ ಮಾಲೀಕ ಆಗಾಗ್ಗೆ ಕರೆ ಮಾಡಿ ತಾರಾಗೆ ಒತ್ತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ತಾರಾ ಗೋಪಿನಾಥ್‌ಗೆ ಕರೆ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.28ರಂದು ತಾರಾ ತಾಯಿ ಸರಳ ತೀರ್ಥಕ್ಷೇತ್ರಗಳಿಗೆ ಹೋಗುವ ಸಲುವಾಗಿ ಮಗಳನ್ನು ತಮ್ಮ ಮನೆಯಲ್ಲಿ ಇರುವಂತೆ ಕೇಳಿಕೊಂಡಿದ್ದರು. ಅದರಂತೆ ತವರು ಮನೆಗೆ ಬಂದ ತಾರಾ, ಮರು ದಿನ ಆರೋಪಿ ಗೋಪಿನಾಥ್‌ನನ್ನು ಹಣದ ವಿಚಾರವಾಗಿ ಮಾತನಾಡಲು ಮನೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ಹೋಗಿ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.