Advertisement

ಅಪ್ರಾಪ್ತನಿಗೆ ಬ್ಲಾಕ್‌ಮೇಲ್ ಮಾಡಿದವನ ಸೆರೆ

12:42 AM Apr 21, 2019 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತನ ಬೆತ್ತಲೆ ಫೋಟೋ ಕದ್ದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂ.ಫಿಲ್‌ ಸಂಶೋಧಕ, ರಾಜಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ವರ್ತೂರು ನಿವಾಸಿ ಎ.ವಿಶ್ವನಾಥ್‌ (21) ಬಂಧಿತ. ಬಾಲಕನ ಇನ್‌ಸ್ಟಾಗ್ರಾಂ ಸ್ನೇಹಿತೆಯ ಖಾತೆ ಹ್ಯಾಕ್‌ ಮಾಡಿದ ಆರೋಪಿ, ಆಕೆಯ ಚಾಟಿಂಗ್‌ನಲ್ಲಿದ್ದ ಬಾಲಕನ ಬೆತ್ತಲೆ ಫೋಟೋ ಕದ್ದು ಬ್ಲಾಕ್‌ಮೇಲ್ ಮಾಡುತ್ತಿದ್ದ.

ಅಲ್ಲದೆ ಇದುವರೆಗೂ ಆರೋಪಿಯು ಬಾಲಕನಿಂದ 6.36 ಲಕ್ಷ ರೂ. ನಗದು ಮತ್ತು 4.50 ಕೆ.ಜಿ. ಬೆಳ್ಳಿ ವಸ್ತುಗಳನ್ನು ಪಡೆದಿದ್ದ. ಆರೋಪಿಯು ಬಾಲಕನಿಂದ ಪಡೆದಿದ್ದ ನಗದು ಹಾಗೂ ಚೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕ 2018ರ ನವೆಂಬರ್‌ನಲ್ಲಿ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಬಾಲಕಿಯನ್ನು ಇನ್‌ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದು, ಇಬ್ಬರೂ ನಿರಂತರವಾಗಿ ಚಾಟಿಂಗ್‌ ಮಾಡುತ್ತಿದ್ದರು.

ಈ ಮಧ್ಯೆ ಬಾಲಕಿ, ಬಾಲಕನ ಬೆತ್ತಲೆ ಫೋಟೋಗೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದ್ದು, ಅದರಂತೆ ಬಾಲಕ ತನ್ನ ಬೆತ್ತಲೆ ಫೋಟೋ ತೆಗೆದುಕೊಂಡು, ಸ್ನೇಹಿತೆಗೆ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.

Advertisement

ಬಾಲಕಿ ಖಾತೆ ಹ್ಯಾಕ್‌: ಈ ನಡುವೆ ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದ ಆರೋಪಿ ವಿಶ್ವನಾಥ್‌, ಬಾಲಕಿಯ ಫೋಟೋ ಹಾಗೂ ಆಕೆಯ ಸ್ನೇಹಿತರ ಪಟ್ಟಿ ಕಂಡು ಆಕೆಯ ಖಾತೆಯನ್ನು ಹ್ಯಾಕ್‌ ಮಾಡಿದ್ದಾನೆ. ಈ ವೇಳೆ ಆಕೆಯ ಚಾಟಿಂಗ್‌ ಹಿಸ್ಟರಿ ತೆಗೆದು ನೋಡಿದಾಗ ಅಲ್ಲಿ ಬಾಲಕನ ನಗ್ನ ಫೋಟೋಗಳನ್ನು ಕಂಡು ಅಚ್ಚರಿಗೊಂಡಿದ್ದಾನೆ.

ನಂತರ ಬಾಲಕನ ಹೆಸರಿಗೆ ಹೊಲುವಂತೆ ನಕಲಿ ಖಾತೆ ತೆರೆದು, ಅದರಲ್ಲಿ ಸಂತ್ರಸ್ತ ಬಾಲಕನ ಫೋಟೋ ಹಾಕಿ, ಆತನಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾನೆ. ಆತಂಕಗೊಂಡ ಬಾಲಕ ಫ್ರೆಂಡ್‌ ರಿಕ್ವೆಸ್ಟ್‌ ಒಪ್ಪಿಕೊಳ್ಳುತ್ತಿದ್ದಂತೆ,

ಆರೋಪಿಯು, ಬಾಲಕನಿಗೆ ಚಾಟಿಂಗ್‌ ಮೂಲಕ “ನಿನಗೆ ಸಂಬಂಧಿಸಿದ ನಗ್ನ ಫೋಟೋಗಳು ತನ್ನ ಬಳಿಯಿವೆ. ಕೂಡಲೇ ನಾನು ಸೂಚಿಸಿದ ಸ್ಥಳಕ್ಕೆ 10 ಲಕ್ಷ ರೂ. ತಂದು ಕೊಡಬೇಕು. ಇಲ್ಲವಾದರೆ, ಎಲ್ಲ ಫೋಟೋಗಳನ್ನು ನಿನ್ನ ಸ್ನೇಹಿತರ ಖಾತೆಗೆಗಳಿಗೆ ಕಳುಹಿಸುತ್ತೇನೆ.

ಅಲ್ಲದೆ, ನೀನು ಫೋಟೋ ಕಳುಹಿಸಿದ ಬಾಲಕಿಯ ಹೆಸರನ್ನು ಬಹಿರಂಗಪಡಿಸುತ್ತೇನೆ’ ಎಂದು ಬ್ಲಾಕ್‌ಮೇಲ್ ಮಾಡಿದ್ದಾನೆ. ಇದರಿಂದ ಹೆದರಿದ ಬಾಲಕ, ಮನೆಯಲ್ಲಿಟ್ಟಿದ್ದ 6.36 ಲಕ್ಷ ರೂ. ನಗದು ಹಾಗೂ 4.50 ಕೆ.ಜಿ. ಬೆಳ್ಳಿ ವಸ್ತುಗಳನ್ನು ಬೇರೆ ಬೇರೆ ದಿನಗಳಂದು, ನಗರದ ವಿವಿಧ ಸ್ಥಳಗಳಲ್ಲಿ ಆರೋಪಿಗೆ ಕೊಟ್ಟಿದ್ದಾನೆ.

ಆದರೆ, ಆರೋಪಿ ನಗ್ನ ಪೋಟೋಗಳನ್ನು ಡೆಲೀಟ್‌ ಮಾಡದೆ ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಬಾಲಕ, ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿ, ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಫ್ರೆಂಡ್ಸ್‌ ಗ್ರೂಪ್‌ ಮೂಲಕ ನಂಬರ್‌” ಆರೋಪಿಯು ತನ್ನ ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಂ ಗ್ರೂಪ್‌ನಲ್ಲಿ ಬಾಲಕನ ಫೋಟೋ ಹಾಕಿ, “ಈತ ನನ್ನ ಸ್ನೇಹಿತ. ಆತನ ಮೊಬೈಲ್‌ ನಂಬರ್‌ ಮಿಸ್ಸಾಗಿ ಹೋಗಿದೆ. ಬೇರೆ ಯಾವ ಮಾರ್ಗದಲ್ಲೂ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ.

ಪರಿಚಯಸ್ಥರು ಇದ್ದರೆ ದಯವಿಟ್ಟು ನಂಬರ್‌ ಕಳುಹಿಸಿ’ ಎಂದು ಕೇಳಿಕೊಂಡಿದ್ದಾನೆ. ಇ‌ನ್ನು ನಂಬಿದ ಕೆಲ ಸ್ನೇಹಿತರು ಬಾಲಕನ ಮೊಬೈಲ್‌ ನಂಬರ್‌ ಕಳುಹಿಸಿದ್ದರು. ಬಳಿಕ ಬಾಲಕನಿಗೆ ನಿರಂತರ ಬ್ಲಾಕ್‌ಮೇಲ್ ಮಾಡುತ್ತಾ ಹಣ ಮತ್ತು ಬೆಳ್ಳಿ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಮನೆ ಭೋಗ್ಯಕ್ಕೆ ಹಣ ಬಳಕೆ: ನಗರದ ವಿಶ್ವವಿದ್ಯಾಲಯ ಒಂದರಲ್ಲಿ ಎಂ.ಫಿಲ್‌ ಅಭ್ಯರ್ಥಿಯಾಗಿರುವ ಆರೋಪಿ, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಸಂತ್ರಸ್ತ ಬಾಲಕನಿಗೆ ಬ್ಲಾಕ್‌ಮೇಲ್ ಮಾಡಿ ಪಡೆದುಕೊಂಡಿದ್ದ ಹಣದಿಂದ ವರ್ತೂರಿನಲ್ಲಿ ಆರು ಲಕ್ಷ ರೂ.ಗೆ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದ.

ಇನ್ನುಳಿದ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಸದ್ಯ ಆರೋಪಿ ಭೋಗ್ಯಕ್ಕೆ ಹಾಕಿಕೊಂಡಿದ್ದ ಮನೆ ಮಾಲೀಕರಿಂದ ಆರು ಲಕ್ಷ ರೂ. ಪಡೆದು, ಮನೆ ಖಾಲಿ ಮಾಡಿಸಲಾಗಿದೆ. ಹಾಗೇ 4.50 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜಾಜಿನಗರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next