Advertisement

ಕೈಯ್ಯಲ್ಲಿ ಕಬ್ಬಿನ ಜೊಲ್ಲೆ, ಮಣ್ಣು ಹಿಡಿದು ಪ್ರತಿಭಟನೆ

02:47 PM May 13, 2019 | Team Udayavani |

ಮದ್ದೂರು: ಕಬ್ಬಿನ ಬಾಕಿ ಪಾವತಿಸುವಂತೆ ಒತ್ತಾಯಿಸಿ ಚಾಂಷುಗರ್‌ ಹಾಗೂ ಕೊಪ್ಪ ಎನ್ನೆಸ್ಸೆಲ್ ಕಾರ್ಖಾನೆಗಳ ವಿರುದ್ಧ ತಾಲೂಕಿನ ದೇಶಹಳ್ಳಿ ಗ್ರಾಮದ ಯುವ ರೈತರು ಭಾನುವಾರ ಕೈಯ್ಯಲ್ಲಿ ಕಬ್ಬಿನ ಜೊಲ್ಲೆ ಹಾಗೂ ಮಣ್ಣು ಹಿಡಿದು ಮದ್ದೂರು-ಕೊಪ್ಪ ರಸ್ತೆ ತಡೆದು ವಿನೂತನ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ದೇಶಹಳ್ಳಿಯಲ್ಲಿ ಸ್ಥಳೀಯ ರೈತರು ಜಮಾವಣೆಗೊಂಡು ಮದ್ದೂರು-ಕೊಪ್ಪ ಮಾರ್ಗದ ರಸ್ತೆತಡೆದು, ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕಬ್ಬು ಬೆಳೆಗಾರರನ್ನು ಅಲೆದಾಡಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ರೈತರು ಹಾಗೂ ಕಬ್ಬು ಬೆಳೆಗಾರರು ಕಬ್ಬಿನ ಜಲ್ಲೆ ಹಿಡಿದು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು. ಸರ್ಕಾರ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಿದರು.

ರೈತರು ಕಾರ್ಖಾನೆಗೆ ಸರಬರಾಜು ಮಾಡಿ 7 ತಿಂಗಳು ಕಳೆದಿದ್ದರೂ ಕಾರ್ಖಾನೆ ಅಧಿಕಾರಿಗಳು ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಪ್ರತಿನಿತ್ಯ ಕಾರ್ಖಾನೆಗೆ ಅಲೆದಾಡುತ್ತಿದ್ದೇವೆ. ರೈತರು ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದರು.

ಈಗಾಗಲೇ ಬೇಸಿಗೆ ರಜೆ ಮುಕ್ತಾಯಗೊಂಡು ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತಿದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಬ್ಬಿನ ಬಾಕಿ ಹಣ ನಂಬಿ ಕುಳಿತಿರುವ ರೈತರೊಂದಿಗೆ ಕಾರ್ಖಾನೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೆ ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲೇ ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗುವ ಮೂಲಕ ರೈತರ ಹಿತವನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಕೇವಲ ಮೇಲುಕೋಟೆ ಕ್ಷೇತ್ರಕ್ಕಷ್ಟೇ ಮೀಸಲಾಗಿದ್ದು, ಸಂಸದರಾಗಿದ್ದ ಹಾಗೂ ಸಚಿವರಾಗಿರುವ ವೇಳೆ ಮದ್ದೂರು ಕ್ಷೇತ್ರವನ್ನು ಕಡೆಗಣಿಸಿದ್ದು ಕೂಡಲೇ ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆ ಅಧಿಕಾರಿಗಳ ಜತೆ ಸಚಿವರು ಸಭೆ ನಡೆಸಿ ಹಣ ಬಿಡುಗಡೆಗೆ ಅಗತ್ಯ ಕ್ರಮ ವಹಿಸಬೇಕು. ಈ ತಿಂಗಳ ಅಂತ್ಯದೊಳಗೆ ಕಬ್ಬಿನ ಬಾಕಿ ಹಣ ಪಾವತಿಸದಿದ್ದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸುವ ಎಚ್ಚರಿಕೆ ನೀಡಿದರಲ್ಲದೇ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬೆಸಗರಹಳ್ಳಿ ಪೊಲೀಸರು ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದರು.

ಪ್ರತಿಭಟನೆಯಲ್ಲಿ ಯುವ ಮುಖಂಡ ಗೌತಮ್‌, ಗ್ರಾಮದ ಮುಖಂಡರಾದ ವೆಂಕಟೇಶ್‌, ರಮೇಶ್‌, ಭರತ್‌, ಅರವಿಂದ್‌, ಮಧು, ಹರ್ಷ, ಸುಹಾಸ್‌, ಕವನ, ರವಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next