ಕದ್ರಿ: ಅಕ್ರಮ ಕಸಾಯಿಖಾನೆಗಳ ಮಾಹಿತಿದಾರರ ಮೇಲೆ ಹಾಗೂ ಪೊಲೀಸರ ಮೇಲೆ ನಡೆದ ಹಲ್ಲೆ ಮತ್ತು ಯೋಧ ದೀಪಕ್ ಮಂಡಲ್ ಹತ್ಯೆ ಖಂಡಿಸಿ ಯುವಾ ಬ್ರಿಗೇಡ್ ವತಿಯಿಂದ ಕದ್ರಿ ಪಾರ್ಕ್‌ನಿಂದ ಕದ್ರಿಯುದ್ಧ ಸ್ಮಾರಕದವರೆಗೆ ಮೋಂಬತ್ತಿ ಮೆರವಣಿಗೆ ನಡೆಯಿತು.
ಅಕ್ರಮ ಗೋಸಾಗಣೆ ತಡೆಯುವ ನಿಟ್ಟಿನಲ್ಲಿ ಹೋರಾಡಿ ಅಕ್ರಮ ಗೋಸಾಗಣೆಕಾರರಿಂದ ಹತ್ಯೆಗೊಳಗಾದ ಬಿಎಸ್‌ಎಫ್ ಯೋಧ ದೀಪಕ್ ಮಂಡಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವಾ ಬ್ರಿಗೇಡ್ ಮತ್ತು ಭಾರತೀಯ ಗೋ ಪರಿವಾರದ ಕಾರ್ಯಕರ್ತರು ‘ಬದುಕುವ ಹಕ್ಕು ನಮಗೂ ಇದೆ’ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.
ಕದ್ರಿ ಯುದ್ಧ ಸ್ಮಾರಕದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಕಾರ್ಯಕರ್ತ ವಿಕ್ರಮ್, ದೇಶದಲ್ಲಿ ಗೋ ರಕ್ಷಕರು ಟಾರ್ಗೆಟ್ ಆಗುತ್ತಿದ್ದಾರೆ. ಅಕ್ರಮ ಗೋಹತ್ಯೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬೆಂಗಳೂರಿನ ನಂದಿನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಕ್ರಮ ಕಸಾಯಿಖಾನೆ ಮುಚ್ಚಿಸಲು ಹೋದ ಬೆಂಗಳೂರು ಪೊಲೀಸರ ಮೇಲೆಯೂ ಕಲ್ಲೆಸೆಯಲಾಗಿದೆ. ದೇಶದ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಗೋಸಾಟ ತಡೆಯಲು ಹೋದ ಯೋಧ ದೀಪಕ್ ಮಂಡಲ್ ಅವರನ್ನು ಹತ್ಯೆಗೈಯಲಾಗಿದೆ. ವಿವಿಧ ಕಾರಣಗಳಿಗೆ ಪ್ರಶಸ್ತಿ ವಾಪಸ್ ಮಾಡುವ ಬುದ್ಧಿಜೀವಿಗಳು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದು, ಮಹಿಳಾ ಆಯೋಗ ಕುರುಡಾಗಿದೆ ಎಂದು ಆರೋಪಿಸಿದರು.
ಭಾರತೀಯ ಗೋಪರಿವಾರದ ವಿದ್ಯಾಲಕ್ಷ್ಮೀ ಕೈಲಂಕಜೆ, ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್ ಕುಕ್ಕೆ, ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ, ಮಂಗಳೂರು ಸಂಪರ್ಕ ಪ್ರಮುಖ್ ವಿನೋದ್, ಭಾರತೀಯ ಗೋಪರಿವಾರದ ಪ್ರಮುಖರಾದ ರವೀಶ ಪೆದಮಲೆ ಮೊದಲಾದವರು ಉಪಸ್ಥಿತರಿದ್ದರು. ಯುವಾಬ್ರಿಗೇಡ್ ಕಾರ್ಯಕರ್ತ ಶ್ರೀಪತಿ ಆಚಾರ್ಯ ಸ್ವಾಗತಿಸಿದರು.