Advertisement

ಪ್ರಚಾರ ಆರ್ಭಟ, ಕೇಳಲಿಲ್ಲ ಗೋಳಾಟ

02:54 PM Apr 23, 2019 | Team Udayavani |

ಕೊಪ್ಪಳ: ನೀರು, ನೀರಾವರಿ ಇಲ್ಲದೆ ಗೋಳಾಡುತ್ತಿರುವ ಇಲ್ಲಿನ ಜನತೆಗೆ ಜನ ನಾಯಕರಿಂದ ನೀರಾವರಿಗೆ ಸಂಬಂಧಿಸಿದ ಭರವಸೆಗಳು ಪುನಾವರ್ತಿತಗೊಂಡಿವೆ. ಒಂದು ತಿಂಗಳಿಂದ ಚುನಾವಣೆ ಭರಾಟೆಯಲ್ಲಿ ತೊಡಗಿದ್ದ ಕಾಂಗ್ರೆಸ್‌, ಬಿಜೆಪಿ ನಾಯಕರು ಸ್ಥಳೀಯ ಹಲವು ಸಮಸ್ಯೆಗಳಿಗಿಂತ ರಾಷ್ಟ್ರ ರಾಜಕಾರಣದ ಮಾತುಗಳನ್ನಾಡಿಯೇ ಮತ ಕೇಳಿದ್ದಾರೆ.

Advertisement

ಹೌದು.. ಕೊಪ್ಪಳ ಲೋಕಸಭಾ ಕ್ಷೇತ್ರ ನೀರಾವರಿ ಸಮಸ್ಯೆಯಿಂದ ತೊಳಾಡುತ್ತಿದೆ. ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವೆವು ಎನ್ನುವ ಮಾತಿಗೇನೂ ಕಡಿಮೆ ಇಲ್ಲ. ಆದರೆ ಹನಿ ನೀರು ರೈತನ ಭೂಮಿಗೆ ಬರುತ್ತಿಲ್ಲ. ಕೃಷ್ಣಾ ಬಿ ಸ್ಕಿಂ, ಸಿಂಗಟಾಲೂರು ಏತ ನೀರಾವರಿಯು, ತುಂಗಭದ್ರಾ ಜಲಾಶಯ, ಡ್ಯಾಂನಲ್ಲಿನ ಹೂಳು, ಸಮನಾಂತರ ಜಲಾಶಯದ ಮಾತುಗಳು ಜನರಿಗೆ ಖುಷಿ ತಂದಿವೆ. ಆದರೆ ಈ ಹಿಂದಿನ ಚುನಾವಣೆಗಳಲ್ಲೂ ಇದೇ ಭರವಸೆಗಳು ವ್ಯಕ್ತವಾಗಿದ್ದವು.

ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ ಆದರು ಕಾಂಗ್ರೆಸ್‌-ಬಿಜೆಪಿಯವರು ಇಲ್ಲಿನ ಸಮಸ್ಯೆಗಳಿಗೆ ಒತ್ತು ನೀಡದೇ ರಾಷ್ಟ್ರ ರಾಜಕಾರಣದ ಮಾತನ್ನಾಡಿದ್ದಾರೆ. ದೇಶದ ರಕ್ಷಣೆ, ಅಭಿವೃದ್ಧಿಗೆ ಮೋದಿ ಬೆಂಬಲಿಸಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷದಲ್ಲಿ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತಾಗಿದೆ. ವಿಶ್ವದ ನಾಯಕನಾದ ಮೋದಿ ಅಭಿವೃದ್ಧಿಯನ್ನು ಗಮನಿಸಿ ಸ್ಥಳೀಯ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಿಜೆಪಿ ನಾಯಕರು ಮೋದಿ ಜಪ ಮಾಡಿದರೆ, ಕಾಂಗ್ರೆಸ್‌ ನಾಯಕರಂತೂ ಮೋದಿ, ಬಿಜೆಪಿಯನ್ನು ತರಾಟೆ ತಗೆದುಕೊಂಡು ಐದು ವರ್ಷದಲ್ಲಿ ಮೋದಿ ಏನೂ ಮಾಡಿಲ್ಲ. ಸುಳ್ಳಿನ ಮನೆ ಕಟ್ಟಿ ಜನರಿಗೆ ಮೋಸ ಮಾಡಿದ್ದಾರೆ. ರೈತ ಸಮುದಾಯಕ್ಕೆ ಯಾವುದೇ ಕೊಡುಗೆಯಿಲ್ಲ. 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕುವ ಮಾತನ್ನಾಡಿದ್ದರು. ಯಾರಿಗೂ ನಯಾಪೈಸೆ ಹಣ ಬಂದಿಲ್ಲ. ನೀರಾವರಿ ಯೋಜನೆಗಳಂತೂ ಗಗನ ಕುಸುಮವಾಗಿವೆ ಎಂದು ಹಳ್ಳಿ ಹಳ್ಳಿಯ ಪ್ರಚಾರದಲ್ಲೂ ಆರ್ಭಟಿಸಿದ್ದಾರೆ.

ಜಾತಿ ರಾಜಕಾರಣವೇ ಹೆಚ್ಚಾಗಿ ಕಂಡು ಬಂದಿದೆ. ಕಾಂಗ್ರೆಸ್‌ ಪಾಳಯದಲ್ಲಿ ಜಾತಿಗೊಬ್ಬರು ಮುಖಂಡರನ್ನು ಕರೆ ಪ್ರಚಾರ ನಡೆಸಲಾಯಿತು. ಕಮಲ ಪಾಳೆಯ ದೇಶ, ರಾಷ್ಟ್ರವಾದ ಸೇರಿದಂತೆ ಮುಸ್ಲಿಂ ನಮಗೆ ಬೆಂಬಲಿಸಲ್ಲ ಎನ್ನುವ ಮಾತನ್ನಾಡಿದೆ.

ಟೀಕೆಗಳಿಗೇನೂ ಕಡಿಮೆ ಇರಲಿಲ್ಲ: ಹಾಲಿ ಸಂಸದ ಸಂಗಣ್ಣ ಕರಡಿ ಜಿಲ್ಲೆಯಲ್ಲಿ 25 ವರ್ಷ ರಾಜಕೀಯದಲ್ಲಿದ್ದಾರೆ. ಅವರು ಏನೂ ಅಭಿವೃದ್ಧಿ ಮಾಡಿಲ್ಲ. ಕಳೆದ 5 ವರ್ಷದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ ಟೀಕಾ ಪ್ರಹಾರ ನಡೆಸಿದರೆ, ಸಂಗಣ್ಣ ಕರಡಿ ಅಭಿವೃದ್ಧಿ ಮಾಡಿದ ಕುರಿತು ಪಟ್ಟಿ ಸಮೇತ ಮಾಹಿತಿ ನೀಡುವೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಎಸೆದಿದ್ದರು. ಅದರಲ್ಲೂ ಭಾಗ್ಯನಗರ ರೈಲ್ವೇ ಗೇಟ್ ವಿಚಾರದಲ್ಲಿ ಕರಡಿ-ಹಿಟ್ನಾಳ ನಡುವೆ ವಾಗ್ವಾದವೇ ನಡೆಯಿತು. ಅಚ್ಚರಿಯ ವಿಷಯವೆಂದರೆ, ಕರಡಿ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು, ಕರಡಿ ಮೇಲೆ ವೈಯಕ್ತಿಕ ಟೀಕೆ ಮಾಡುವುದಕ್ಕಿಂತ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ಟೀಕಾ ಪ್ರಹಾರ ನಡೆಸಿದ್ದು, ಗಮನ ಸೆಳೆದಿದೆ.

Advertisement

ಜನರಿಗೆ ನೀರಾವರಿ ಯೋಜನೆಗಳ ಬಗ್ಗೆ ಪ್ರತಿ ಚುನಾವಣೆಯಲ್ಲಿ ಭರವಸೆಗಳ ಸುರಿ ಮಳೆ ಸಿಗುತ್ತಿವೆ. ಆದರೆ ಗೆದ್ದ ಬಳಿಕ ಯಾವುದೇ ಯೋಜನೆಗಳು ಸಕಾಲಕ್ಕೆ ಕಾರ್ಯಗತವಾಗಲ್ಲ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ನಾವು ಅಂದುಕೊಂಡಂತೆ ಅಭಿವೃದ್ಧಿ ಕೆಲಸ ಮಾಡಲ್ಲ. ಬರಿ ಜಾತಿ, ಹಣದ ರಾಜಕಾರಣವೇ ಹೆಚ್ಚಾಗಿದೆ. ಬರದ ನಿವಾರಣೆ, ಜನರು ದುಡಿಮೆ ಇಲ್ಲದೆ ಗುಳೆ ಹೋಗುವುದು ಇವರ ಕಣ್ಣಿಗೆ ಕಾಣಲ್ಲ. ನಮ್ಮದು ಗೋಳಾಟ ಅವರಿಗೆ ಚುನಾವಣಾ ಪ್ರಚಾರದ ಆರ್ಭಟ ಎನ್ನುತ್ತಿದೆ ಜನತೆ.

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next