ಮಂಡ್ಯ: ಐಟಿ ದಾಳಿ ನಡೆಯುವ ಬಗ್ಗೆ ಸ್ಥಳಿಯ ಜೆಡಿಎಸ್ ಕಾರ್ಯಕರ್ತರಿಗೆ ಸುಳಿವು ನೀಡಿದ್ದು ಒಬ್ಬ ಕ್ಯಾಬ್ ಚಾಲಕ. ಆತ ಸಿಎಂ ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಂತೆ. ಆತನ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ. ಐಟಿ ಬಿಸಿಯ ಕಾವು ತಣ್ಣಗಾದ ಬಳಿಕ ಅದನ್ನು ತಿಳಿಸುತ್ತೇವೆ. ನಿನ್ನ ಕಾರ್ಯಾಚರಣೆಗೆ ಹ್ಯಾಟ್ಸಾಫ್ ಯು ಬ್ರದರ್..ಹೀಗಂತ ಖಾಸಗಿ ವಾಹಿನಿಯೊಂದಕ್ಕೆ ಜೆಡಿಎಸ್ ಕಾರ್ಯಕರ್ತೆಯೊಬ್ಬರು ತಿಳಿಸುವುದರೊಂದಿಗೆ ಈ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಸವೇಶ್ವರ ನಗರದ ಯುಆರ್‌ಎಸ್ ಟ್ರಾವೆಲ್ ಏಜೆನ್ಸಿಯಿಂದ ಏಕಕಾಲಕ್ಕೆ 200 ಕ್ಯಾಬ್‌ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 200 ಕ್ಯಾಬ್‌ಗಳು ಒಂದೇ ಸಮಯಕ್ಕೆ ಬುಕ್ ಆಗಿ ಎಲ್ಲಿಗೆ ಹೋಗಬೇಕೆಂಬ ಪ್ರಶ್ನೆ ಸಹಜವಾಗಿಸಂಸ್ಥೆಯವರಿಂದ ಕೇಳಿಬಂದ ಸಮಯದಲ್ಲಿ ಹಾಸನ, ಮಂಡ್ಯ, ಮೈಸೂರು ಎಂದು ಹೇಳಿರಬಹುದಾದ ಸಾಧ್ಯತೆಗಳಿವೆ. ದಿಢೀರನೆ ನಡೆದಿರುವ ಈ ಪ್ರಕ್ರಿಯೆ ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಮಾಹಿತಿ ಕ್ಯಾಬ್ ಚಾಲಕನೊಬ್ಬನಿಗೆ ಗೊತ್ತಾಗಿದ್ದು, ಆತ ಕುಮಾರಸ್ವಾಮಿ ಅಭಿಮಾನಿ ಎಂದು ಹೇಳಲಾಗಿದೆ. ಆತ ಜೆಡಿಎಸ್ ಕಾರ್ಯಕರ್ತೆಯೊಬ್ಬರಿಗೆ ದೂರವಾಣಿ ಕರೆ ಮಾಡಿ ನಾಳೆ ದೊಡ್ಡ ಮಟ್ಟದ ಐಟಿ ರೇಡ್ ನಡೆಯಲಿದೆ. ಜಾಗೃತರಾಗಿರಿ ಎಂದು ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. ಜೆಡಿಎಸ್ ಮಹಿಳಾ ಕಾರ್ಯಕರ್ತೆ ಅವರು ಸಚಿವ ಪುಟ್ಟರಾಜು ಅಭಿಮಾನಿಯಾಗಿದ್ದು, ಅವರು ಕ್ಯಾಬ್ ಚಾಲಕನಿಂದ ಪಡೆದ ಮಾಹಿತಿಯನ್ನು ಪುಟ್ಟರಾಜು ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಕಾರ್ಯಕರ್ತೆಯೊಬ್ಬರು ನೀಡಿರುವ ಹೇಳಿಕೆಯಂತೆ, ಐಟಿ ದಾಳಿ ವಿಚಾರದ ಬಗ್ಗೆ ನಿಖರವಾದ ಮಾಹಿತಿ ನೀಡಿದ್ದು ನಾಗಮಂಗಲ ತಾಲೂಕಿನ ಕದಬಳ್ಳಿ ಭಾಗದ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತನಿಂದ ಗೊತ್ತಾಯಿತು. ಅವರು ಮೊದಲು ನನಗೆ ವಿಷಯ ತಿಳಿಸಿದರು. ನಾನು ಮತ್ತು ಅವರು ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದೆವು. ಇದರ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.