Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸ್ಫರ್ಧೆ ಮಾಡಿತ್ತು ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಸಿಕ್ಕಿರುವ ಮತಗಳೇ ಉತ್ತರ ನೀಡಿವೆ ಎಂದರು.
Related Articles
Advertisement
ಮನಗೂಳಿ ಮಗನ ಹೈಜಾಕ್:
ಮಾಜಿ ಸಚಿವ ಎಂ.ಸಿ.ಮನಗೂಳಿ ಮರಣದ ನಂತರ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿತು. ಜತೆಗೆ, ನಮ್ಮ ಸಂಘಟನೆಯನ್ನೂ ದುರ್ಬಲ ಮಾಡಲಾಗಿತ್ತು. ಇದು ನನ್ನ ಗಮನದಲ್ಲಿತ್ತು. ಮತಗಟ್ಟೆಗಳಲ್ಲಿ ಕಾರ್ಯಕರ್ತರನ್ನು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಈ ಕಾರಣಕ್ಕೆ ನಮಗೆ ಹಿನ್ನಡೆ ಉಂಟಾಯಿತು. ಆದರೂ ಈ ಫಲಿತಾಂಶದಿಂದ ನಾನು ಅಧೀರನೂ ಆಗಿಲ್ಲ, ನನಗೆ ಆತಂಕವೂ ಇಲ್ಲ ಎಂದು ಹೇಳಿದರು.
ಹಾನಗಲ್ʼನಲ್ಲಿ ನಮಗೆ ನೆಲೆ ಇರಲಿಲ್ಲ. ಆದರೆ, ಸಿಂದಗಿಯಲ್ಲಿ ನಮ್ಮವರೇ ಶಾಸಕರಿದ್ದರು. ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇರುತ್ತಿತ್ತು ಎಂದರು.
ಹಣದಿಂದಲೇ ಚುನಾವಣೆ ನಡೆದಿದೆ:
ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಾರೆ. ಹಣದಿಂದಲೇ ಈ ಚುನಾವಣೆ ನಡೆದಿದೆ ಎಂದು ಹೇಳಿದರು.
8ರಿಂದ ಜಿಲ್ಲಾವಾರು ಸಭೆ:
ಇದೇ ನವೆಂಬರ್ 8 ರಿಂದ 16 ರವರೆಗೆ ಪಕ್ಷದ ಕಚೇರಿಯಲ್ಲಿ ಪ್ರತಿ ಜಿಲ್ಲಾವಾರು ಸಭೆಗಳನ್ನು ಕರೆಯಲಾಗಿದೆ. ಪ್ರತಿದಿನ ನಾಲ್ಕು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದೇನೆ. ಪದಾಧಿಕಾರಿಗಳು ಹಾಗೂ ಸಂಭನೀಯ ಅಭ್ಯರ್ಥಿಗಳು ಈ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟುವುದು ಹಾಗೂ ವಿಷಯಾಧಾರಿತವಾಗಿ ಹೋರಾಟ ನಡೆಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ 2023ಕ್ಕೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು.