Advertisement

Mangaluru ಅರ್ಧ ತಾಸು ದರೋಡೆಕೋರರ ಜತೆ ಹೋರಾಡಿದ್ದ ಉದ್ಯಮಿ

11:39 PM Jun 22, 2024 | Team Udayavani |

ಮಂಗಳೂರು: ನಗರದ ಹೊರ ವಲಯದ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಶುಕ್ರವಾರ ರಾತ್ರಿ ನಡೆದ ದರೋಡೆ ಸಂದರ್ಭ ಮನೆಯ ಮಾಲಕರಾದ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಅವರು ಅರ್ಧ ತಾಸು ದರೋಡೆಕೋರರೊಂದಿಗೆ ಹೋರಾ ಡಿದ್ದರು. ತನ್ನ ಮತ್ತು ಮನೆಯವರ ಜೀವರಕ್ಷಣೆಗಾಗಿ ಜೀವದ ಹಂಗು ತೊರೆದು ಆಯುಧ ನಿರತ ದರೋಡೆ ಕೋರರೊಂದಿಗೆ ಸೆಣಸಿದ್ದರು.

Advertisement

ಚೂರಿ ಇರಿತ ಮತ್ತು ಹೊರಳಾಟ ದಿಂದ ಗಾಯಗೊಂಡ ಪದ್ಮನಾಭ ಕೋಟ್ಯಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕಾಏಕಿ ನಡೆದ ದರೋಡೆಕೋರರ ದಾಳಿಯ ದೃಶ್ಯ ಅವರ ಕಣ್ಣಿಗೆ ಕಟ್ಟಿದಂತಿದೆ. “ನಾನು ಶುಕ್ರವಾರ ಸಂಜೆ 6.30ರ ಸುಮಾರಿಗೆ ಮನೆಗೆ ಬಂದೆ. ಸ್ವಲ್ಪ ಹೊತ್ತಿನಲ್ಲಿ ತೋಟದ ಕಡೆಗೆ ಹೋದೆ. ಆಗ ಶೆಡ್‌ನ‌ಲ್ಲಿದ್ದ ಕಾರ್ಮಿಕರು ಕರೆಂಟ್‌ ಬರುತ್ತಿಲ್ಲ ಎಂದರು.

ಏನಾದರೂ ಸರಿ ಮಾಡಲು ಸಾಧ್ಯವೇ ಎಂದು ನೋಡಲು 7.30 ರ ಸುಮಾರಿಗೆ ಟೆಸ್ಟರ್‌ ಹಿಡಿದು ಹೋದೆ. ಬಳಿಕ ಪರಿಶೀಲಿಸಿದರೂ ನನ್ನಿಂದ ಆಗಲಿಲ್ಲ. ಅಲ್ಲಿಂದ ಹಿಂದಿರುಗುವಷ್ಟರಲ್ಲೇ ನಾಯಿಗಳು ಬೊಗಳತೊಡಗಿದವು. ನೋಡನೋಡುತ್ತಿದ್ದಂತೆ ಎತ್ತರದ ಆವರಣ ಗೋಡೆ ಹಾರಿ ಏಳೆಂಟು ಮಂದಿ ಮುಸುಕುಧಾರಿಗಳು ನನ್ನನ್ನು ಸುತ್ತುವರಿದು ಚೂರಿಯಿಂದ ಕಾಲಿಗೆ ಇರಿದರು. ನಾನು ಅವರೊಡನೆ ಸುಮಾರು ಅರ್ಧ ತಾಸು ಹೋರಾಡಿದೆ. ಬೊಬ್ಬೆ ಹೊಡೆದೆ. ಅಷ್ಟರಲ್ಲೇ ಕೆಲವು ದರೋಡೆಕೋರರು ನನ್ನ ಪುತ್ರ ಮತ್ತು ಪತ್ನಿಯ ಬಳಿ ತೆರಳಿ ಅವರಿಗೆ ಚೂರಿ ತೋರಿಸಿ ಹೆದರಿಸಿದರು. ಆಗ ನನ್ನ ಪುತ್ರ ಮತ್ತು ಪತ್ನಿ ನಮಗೇನೂ ಮಾಡ ಬೇಡಿ. ಬೇಕಾದದ್ದು ಕೊಂಡುಹೋಗಿ ಎಂದು ಅಂಗಲಾ ಚಿದರು. ಅವರ ಮೈಮೇ ಲಿದ್ದ ಚಿನ್ನಾ ಭರಣವನ್ನು ಕೂಡ ತೆಗೆದು ಕೊಟ್ಟರು. ಕಪಾಟುಗಳ ಕೀ ಗಳನ್ನೂ ಕೊಟ್ಟರು.

ನನ್ನ ಬೊಬ್ಬೆ ಕೇಳಿ ಪಕ್ಕದ ಶೆಡ್‌ನ‌ಲ್ಲಿದ್ದ 2-3 ಮಂದಿ ಕಾರ್ಮಿಕರು ಬಂದರು. ಆದರೆ ದರೋಡೆಕೋರರು ಅವರನ್ನೂ ಬೆದರಿಸಿದರು. ಆಗ ಕಾರ್ಮಿಕರು ಅಲ್ಲಿಂದ ತೆರಳಿ ನಮ್ಮ ಸಂಬಂಧಿಕರಿಗೆ ದೂರವಾಣಿ ಮಾಡಿದರು. ಕೆಲವೇ ನಿಮಿಷಗಳಲ್ಲಿ ದರೋಡೆಕೋರರು ಚಿನ್ನ, ಹಣವನ್ನೆಲ್ಲ ದೋಚಿಕೊಂಡು ಹೋದರು. ಇವೆಲ್ಲವೂ ಮುಕ್ಕಾಲು ಗಂಟೆಯಲ್ಲಿ ಮುಗಿದಿತ್ತು ಎನ್ನುತ್ತಾರೆ ಪದ್ಮನಾಭ ಕೋಟ್ಯಾನ್‌.

ಏನೂ ಆಗಿರಲಿಲ್ಲ
ಹದಿನೈದು ವರ್ಷಗಳಿಂದ ನಾನು ಇದೇ ಸ್ಥಳದಲ್ಲಿದ್ದೇನೆ. ನಾನು ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯನಾಗಿದ್ದಾಗಲೂ ದೇವಸ್ಥಾನ ಗಳ ಕಾರ್ಯಕ್ರಮಗಳಿಗೆ ಹೋಗಿ ತಡರಾತ್ರಿ ಮನೆಗೆ ಮರಳುತ್ತಿದ್ದೆ. ಆಗಲೂ ಇಂಥ ಅನುಭವ ಆಗಿರಲಿಲ್ಲ. ಯಾರೂ ಹೆದರಿಸಿಯೂ ಇರಲಿಲ್ಲ. ಈಗ ಸಾಕಷ್ಟು ಮನೆಗಳಾಗಿವೆ. ಮನೆಗೂ ಸಿಸಿ ಕೆಮರಾ ಸಹಿತ ಭದ್ರತಾ ಕ್ರಮಗಳನ್ನು ಕೈಗೊಂ ಡಿದ್ದೆ. ಆದರೂ ಈ ಘಟನೆ ನಡೆದಿದೆ ಎನ್ನುತ್ತಾರೆ ಕೋಟ್ಯಾನ್‌.

Advertisement

ಹೋಗುವಾಗ ಗೇಟ್‌ ತೆಗೆಸಿದರು
ಮನೆಯ ಗೇಟ್‌ಗೆ ಬೀಗ ಹಾಕಿತ್ತು. ಅದಕ್ಕೆ ರಿಮೋಟ್‌ ಸಿಸ್ಟಂ ಇತ್ತು. ಹಾಗಾಗಿ ದರೋಡೆಕೋರರು ಗೇಟ್‌ನ ಮೂಲಕ ಪ್ರವೇಶಿಸದೆ ಆವರಣಗೋಡೆಯನ್ನು ಹಾರಿ ಒಳಗೆ ನುಗ್ಗಿದ್ದರು. ಆದರೆ ಹೊರ ಗೆ ಹೋಗುವಾಗ ಮನೆಯವರಿಂದಲೇ ಗೇಟ್‌ ತೆಗೆಸಿ, ಕಾರಿನ ಬೀಗ ಪಡೆದು ಅದೇ ಕಾರಿನಲ್ಲಿ ಸುಮಾರು ಅರ್ಧ ಕಿ.ಮೀ.ವರೆಗೆ ಹೋಗಿ ಬಳಿಕ ಅವರು ಬಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ತನಿಖೆ ಚುರುಕು
ದರೋಡೆ ಪ್ರಕರಣ ಭೇದಿಸಲು ಪೊಲೀಸರು ತನಿಖೆ ಚುರುಕುಗೊ ಳಿಸಿದ್ದಾರೆ. ಮೂರು ತನಿಖಾ ತಂಡಗ ಳನ್ನು ರಚಿಸಲಾಗಿದ್ದು, ಪೊಲೀಸರು ಕಾರ್ಯ ನಿರತರಾಗಿದ್ದಾರೆ.

7.50 ಲ.ರೂ. ಮೌಲ್ಯದ
ಸೊತ್ತು ದರೋಡೆ?
ಒಟ್ಟು ಈ ಪ್ರಕರಣದಲ್ಲಿ ಸುಮಾರು 1.50 ಲ.ರೂ. ಮತ್ತು ಅಂದಾಜು 6 ಲ. ರೂ. ಮೌಲ್ಯದ ಚಿನ್ನಾಭರಣ ಸಹಿತ ಅಂದಾಜು 7.50 ಲ.ರೂ. ಮೌಲ್ಯದ ನಗ ನಗದನ್ನು ದರೋಡೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಆಸ್ಪತ್ರೆಗೆ ಪ್ರಮುಖರ ಭೇಟಿ
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮಾಜಿ ಸಚಿವ ರಮಾನಾಥ ರೈ, ಗೈರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವೈಫೈ ಬಾಕ್ಸ್‌ ಕೊಂಡೊಯ್ದರು!
ದರೋಡೆಕೋರರು ಸಾಕಷ್ಟು ಯೋಜನಾಬದ್ಧವಾಗಿ ಕೃತ್ಯವೆಸಗಿದ್ದರು. ಮನೆಯ ಆವರಣ ಗೋಡೆ, ಗೇಟ್‌ಗಳಲ್ಲಿ ಸಿಸಿ ಕೆಮರಾಗಳಿರುವುದನ್ನು ಅರಿತಿದ್ದರು. ಅದರ ಹಾರ್ಡ್‌ ಡಿಸ್ಕ್ ಅನ್ನು ಕೊಂಡೊಯ್ಯಲು ಯೋಜನೆ ರೂಪಿಸಿದ್ದರು. ಆದರೆ ಗಡಿಬಿಡಿಯಲ್ಲಿ ಹಾರ್ಡ್‌ಡಿಸ್ಕ್ನ ಬದಲು ವೈ ಫೈ ಸಂಪರ್ಕದ ಉಪಕರಣವನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಭಾಷೆ ಹಿಂದಿ, ಸ್ಥಳೀಯ ಶೈಲಿ!
ದರೋಡೆಕೋರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದರೆ ಅದು ಮೂಲತಃ ಹಿಂದಿ ಭಾಷಿಕರು ಮಾತನಾಡುವಂತೆ ಇರಲಿಲ್ಲ. ಬದಲಿಗೆ ಕರಾವಳಿ ಭಾಗದವರು ಮಾತನಾಡುವ ರೀತಿಯಲ್ಲಿತ್ತು. 9 ಮಂದಿಯ ಪೈಕಿ ಓರ್ವ ಮಾಸ್ಕ್ ಧರಿಸಿರಲಿಲ್ಲ. ಆತ ಟೀಮ್‌ ಲೀಡರ್‌ನಂತೆ ಸೂಚನೆಗಳನ್ನು ಕೊಡುತ್ತಿದ್ದ ಎಂದು ತಿಳಿದುಬಂದಿದೆ.

ಮಹತ್ವದ ಸುಳಿವು ಲಭ್ಯ?
ಕೃತ್ಯ ನಡೆದಿರುವ ಮನೆ, ಮನೆಯ ಪರಿಸರದಲ್ಲಿ ಲಭಿಸಿರುವ ಪರಿಕರ, ಇತರ ಸಾಕ್ಷ್ಯಗಳು ಹಾಗೂ ದರೋಡೆಕೋರರು ಬಂದಿರುವ ವಾಹನದ ಮಾಹಿತಿ ಸಹಿತ ತನಿಖೆಗೆ ಪೂರಕವಾದ ಅಂಶಗಳು ಲಭ್ಯವಾಗಿದ್ದು, ಈ ಸುಳಿವನ್ನು ಆಧರಿಸಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಕಾರು ತೆರಳಿರುವ ರಸ್ತೆಯ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next