Advertisement

ಗಬ್ಬೆದ್ದು ನಾರುತ್ತಿದೆ ಬಸ್‌ ನಿಲ್ದಾಣ

10:48 AM Jul 19, 2019 | Suhan S |

ಅಂಕೋಲಾ: ತಾಲೂಕಿನ ಬಸ್‌ ನಿಲ್ದಾಣದೊಳಗೆ ಕಾಲಿರಿಸುವುದಾದರೆ ಮೂಗು ಮುಚ್ಚಿಕೊಂಡೆ ಬರಬೇಕು. ಶೌಚಾಲಯದ‌ ತ್ಯಾಜ್ಯ ಟ್ಯಾಂಕ್‌ ತುಂಬಿ ತುಳುಕುತಿದ್ದು ನಿಲ್ದಾಣದ ಆವರಣವೆಲ್ಲ ತ್ಯಾಜ್ಯ ನೀರು ಮಳೆ ನೀರಿನೊಂದಿಗೆ ಬೆರೆತು ನಿಲ್ದಾಣ ಗಬ್ಬು ನಾರುತ್ತಿದೆ. ಇಲ್ಲಿಗೆ ಬಂದ ಪ್ರಯಾಣಿಕರ ಪರಿಸ್ಥಿತಿ ಹರೋಹರ.

Advertisement

ಇದು ತಾಲೂಕಿನ ಸುಸಜ್ಜಿತವಾಗಿ ನಿರ್ಮಾಣ ಹಂತದಲ್ಲಿರುವ ಹೈಟೆಕ್‌ ಬಸ್‌ ನಿಲ್ದಾಣದ ಕಥೆ. ಈ ನಿಲ್ದಾಣದಲ್ಲಿ ಶೌಚಾಲಯದ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದ ಆಗಾಗ ಸಮಸ್ಯೆ ಉದ್ಭವಿಸುತ್ತಿದೆ. ಶೌಚಾಲಯದ ತ್ಯಾಜ್ಯ ಟ್ಯಾಂಕ ತುಂಬಿಕೊಂಡು ನೀರು ಹೊರ ಚೆಲ್ಲಿದರು ಇದನ್ನು ಸರಿಪಡಿಸುವ ಗೋಜಿಗೆ ಯಾರು ತಲೆ ಕೆಡಿಸಿ ಕೊಳ್ಳುವುದಿಲ್ಲ.

ಶೌಚಾಲಯದ ತ್ಯಾಜ್ಯ ಟ್ಯಾಂಕ್‌ ತುಂಬಿದಾಗ ಪುರಸಭೆಯವರು ಬಂದು ಅದನ್ನು ವಿಲೇವಾರಿ ಮಾಡಬೇಕು. ಅದಕ್ಕೆ ಪೂರ್ವದಲ್ಲಿ ಪುರಸಭೆಯವರಿಗೆ ಅಂಕೋಲಾ ಘಟಕದಿಂದ ಹಣ ಪಾವತಿಸಬೇಕಾಗುತ್ತದೆ. ಈ ಹಿಂದೆ ಹಣ ಪಾವತಿ ಮಾಡಲು ಇಲಾಖೆ ವಿಳಂಬಿಸಿದಾಗ ಸಾರ್ವಜನಿಕರು ಪ್ರತಿಭಟಿಸಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈಗ ಮಳೆ ಸುರಿಯುತ್ತಿರುವುದರಿಂದ ಟ್ಯಾಂಕ್‌ನ ತ್ಯಾಜ್ಯ ನೀರು ಮತ್ತು ಮಳೆ ನೀರು ಸೇರಿ ನಿಲ್ದಾಣದ ತುಂಬೆಲ್ಲಾ ಗಬ್ಬು ನಾರುತ್ತಿದೆ. ಮೊದಲೆ ಇಲ್ಲಿ ಪ್ರಯಾಣಿಕರಿಗೆ ನಿಲ್ಲುವ ಸ್ಥಳಾವಕಾಶ ಇಲ್ಲ. ಅಲ್ಲಲ್ಲಿ ನಿಂತು ಬಸ್‌ ಕಾಯುವ ಪರಿಸ್ಥಿತಿಯಲ್ಲಿ ಶೌಚಾಲಯದ ನೀರಿನಿಂದ ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನ್ಯಾಯವಾದಿ ಉಮೇಶ ನಾಯ್ಕ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next