ಸಾಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ಹೊಡೆದ ಘಟನೆ ತಾಲೂಕಿನ ಆನಂದಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಐಗಿನಬೈಲು ಬಳಿ ಆ.26ರ ಗುರುವಾರ ತಡರಾತ್ರಿ ನಡೆದಿದೆ.
ಗೋಕರ್ಣದಿಂದ ಸಾಗರ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಐಗಿನಬೈಲು ತಿರುವಿನಲ್ಲಿ ಗುರುವಾರ ತಡರಾತ್ರಿ ಪಲ್ಟಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ಅಪಘಾತದ ಶಬ್ದ ಕೇಳಿ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಹಕಾರ ನೀಡಿದರು.
ಬಸ್ ಪಲ್ಟಿಯಾಗಿದ್ದರಿಂದ 25 ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ 18 ಪ್ರಯಾಣಿಕರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರೆ ಇನ್ನುಳಿದ 7 ಪ್ರಯಾಣಿಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.