ಕಣ್‌ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ… ಮೊಬೈಲ್‌ನಲ್ಲಿ ಬರುತ್ತಿದ್ದ ಈ ಹಾಡಿಗೂ ಬಸ್‌ನಲ್ಲಿ ಎದುರು ಕುಳಿತಿದ್ದ ಹುಡುಗನಿಗೂ ಏನೋ ಲಿಂಕ್ ಆಗುವ ಹಾಗಿತ್ತು. ಬಸ್ಸಲ್ಲಿ ಪ್ರಯಾಣ ಮಾಡುವಾಗ, ಅದರಲ್ಲೂ ದೂರ ಪ್ರಯಾಣ ಮಾಡುವಾಗ “ಪಕ್ಕಕ್ಕೆ ಸುಂದರವಾಗಿರೋ ಹುಡುಗಿ ಬಂದು ಕುಳಿತುಕೊಳ್ಳಲಿ’ ಅಂತ ಹುಡುಗರಿಗೆ ಹೇಗೆ ಅನಿಸುತ್ತೋ, ಹಾಗೇ “ಪಕ್ಕದಲ್ಲಿ ಅಲ್ಲದಿದ್ರೂ ಅಟ್ಲೀಸ್ಟ್ ಎದುರಿನ ಸೀಟ್‌ನಲ್ಲಾದ್ರೂ ಸೂಪರ್ ಆಗಿರುವ ಹುಡುಗ ಕೂರಬಾರದೇ’ ಅಂತ ಹುಡುಗಿಯರಿಗೂ ಅನ್ನಿಸುತ್ತೆ.
ಮುಂಜಾನೆ ಐದು ಗಂಟೆಯ ಮಂಜಿನಲ್ಲಿ, “ತುಸು ಮೆಲ್ಲ ಬೀಸು ಗಾಳಿಯೇ’ ಎಂದು ಹಾಡುತ್ತಾ ತಣ್ಣಗೆ ಮೈ ಸವರುತ್ತಿದ್ದ ಇಬ್ಬನಿಯ ಜೊತೆ, ಬಸ್‌ನಲ್ಲಿ ಕುಳಿತಿದ್ದೆ. ಚಳಿಗೆ ಬಿಳುಚಿಕೊಂಡಿದ್ದ ಬೆರಳುಗಳು, ಮುದುಡಿ ಮಲಗಿದ್ದ ಮನಸಿಗೂ ಅವನ ಆಗಮನದ ಆಸೆಯ ಬಿಸಿಯನ್ನು ಸವರಿತ್ತು.
ಫಾರ್ಮಲ್ ಡ್ರೆಸ್ಸು, ಕೈಗೆ ಫಾಸ್ಟ್‌ಟ್ರ್ಯಾಕ್ ವಾಚ್, ನೀಟಾಗಿ ಬಾಚಿರೋ ಕೂದಲು, ಹಣೆಯಲ್ಲಿ ಗಂಧ, ಕತ್ತಲ್ಲಿ ರುದ್ರಾಕ್ಷಿ, ಇನ್ನೊಂದು ಕೈಯಲ್ಲಿ ಕೆಂಪು ಕಾಶಿದಾರ…ಅಬ್ಟಾ, ಹುಡುಗರನ್ನು ಇಷ್ಟೆಲ್ಲಾ ಡಿಟೇಲ್ ಆಗಿ ನೋಡ್ತಾರಾ ಹುಡುಗಿಯರು ಅಂತ ಕೇಳಬಾರದು. ಹೌದೆಂದು ಹುಡುಗೀರು ಒಪ್ಪಿಕೊಳ್ಳೋದಿಲ್ಲ. ಬಸ್ ಹತ್ತಿ ಕುಳಿತವನೇ ಬುಕ್ ತೆಗು ಓದೋಕೆ ಶುರು. ಅರರೆ!! ಈಗಿನ ಕಾಲದಲ್ಲೂ ಇಷ್ಟು ಶಿಸ್ತಿನ ಹುಡುಗರು ಇದ್ದಾರಾ ಅಂತ ಆಶ್ಚರ್ಯ ಅಥವಾ ಎಲ್ಲಾ ಬರಿ ಪೋಸ್ ಆಗಿರಬಹುದಾ ಎಂಬ ಅನುಮಾನ ಕಾಡಿತು. ಆದರೂ ಮಂಜುಗಟ್ಟಿದ್ದ ವಾತಾವರಣದಲ್ಲಿ ಬಿಸಿ ಗಾಳಿ ಬೀಸುತ್ತಿರೋ ಅನುಭವ.
ಅವನ ಮೇಲೆ ನೆಟ್ಟ ದೃಷ್ಟಿಯನ್ನು ಬದಲಾಯಿಸಿದ್ದು ಮೊಬೈಲ್‌ನಲ್ಲಿ ಚೇಂಜ್ ಆದ ಹಾಡು. “ಓ ನಲ್ಮೆಯ ನಾಯಕನೇ ಎಂದು ನಿನ್ನ ಆಗಮನ..’ ಅನ್ನೋ ಪ್ರಶ್ನೆಗೆ ಉತ್ತರ ನನ್ನೆದುರೇ ಕುಳಿತಿದೆಯೇನೋ ಎಂಬ ಭಾವ ಚಿಗುರೊಡೆಯತೊಡಗಿತ್ತು. ಒಮ್ಮೆ ತಿರುಗಿ ನೋಡಬಾರದೇಕೆ? ಒಂದು ಸಲ ಒಂದೇ ಒಂದು ಸಲ ನೋಡು ಸಾಕು ಎಂದೆಲ್ಲಾ ಮನಸ್ಸು ಗೋಗರೆಯತೊಡಗಿತು.
ಮನಸ್ಸಿನ ಸರಿಗಮಪ, ಥಕಧಿಮಿತೋಂಗಳ ಮಧ್ಯೆಯೇ, ಮಾತನಾಡಿಸಿಬಿಡಲಾ? ಎಂಬ ತವಕ ಮೂಡಿತು. ಅಷ್ಟರಲ್ಲೇ ಕಂಡಕ್ಟರ್‌ನ ಸೀಟಿ ಅವನ ನಿರ್ಗಮನವನ್ನು ನಿರ್ಧರಿಸಿದಂತಿತ್ತು. ಅವನು ಹೊರಟ ಆ ಕ್ಷಣ ಯಾಕೋ ಮನಸ್ಸಿನ ಆಸೆಗಳೆಲ್ಲಾ ಅವನ ಹಿಂದೆಯೇ ಹೊರಟಂತಾಯ್ತು.
“ಒಂದೇ ಬಾರಿ ನನ್ನ ನೋಡಿ, ಮಂದ ನಗಿ ಹಾಂಗ ಬೀರಿ, ಮುಂದ ಮುಂದ ಮುಂದಕ ಹೋದ ಹಿಂದ ನೋಡದ ಗೆಳತೀ, ಹಿಂದ ನೋಡದ’ ಎಂಬ ಹಾಡಿನಂತಾಗಿದ್ದ ಮನಸ್ಸಿನ ತವಕವನ್ನು ಅದೇ ಬಸ್‌ನ ಇನ್ನೊಂದು ಮೂಲೆಯಲ್ಲಿ ಕುಳಿತಿದ್ದ ಗೆಳತಿಯ ಬಳಿ ಹೇಳಿಕೊಂಡೆ. “ಹೌದು, ಅವನನ್ನು ನೋಡಿ ನನಗೂ ಹಾಗೇ ಆಗಿತ್ತು’ ಎಂಬ ಅವಳ ಉತ್ತರ ಕೇಳಿ ಇಬ್ಬರಿಗೂ ಜೋರು ನಗು.
ಭಾವನೆಗಳು ಕೂಡಾ ಚಲಿಸುವ ಮೋಡದಂತೆಯೇ ಅನ್ನುತ್ತಾರೆ. ಆದರೂ, ನಿನ್ನ ಮುಖವನ್ನು ಮರೆಯಲಾಗುತ್ತಿಲ್ಲಾ ಹುಡುಗ. ಮತ್ತೂಮ್ಮೆ ಅದೇ ಬಸ್ ಹತ್ತು, ಅದೇ ಸೀಟ್‌ನಲ್ಲಿ ಕುಳಿತು, ಒಮ್ಮೆ ನನ್ನತ್ತ ತಿರುಗಿ ನೋಡು…
– ಜಯಲಕ್ಷ್ಮಿ ಭಟ್ ಡೊಂಬೆಸರ