Advertisement

ಈ ಮಾರ್ಗದಲ್ಲಿ ನೇತಾಡಿಕೊಂಡೇ ಬಸ್‌ ಯಾನ

11:49 PM Jan 03, 2020 | Sriram |

ಬಂಟ್ವಾಳ: ಮಂಗಳೂರು – ಧರ್ಮಸ್ಥಳ ಮಧ್ಯೆ ಕೆಎಸ್‌ಆರ್‌ಸಿ ಬಸ್ಸುಗಳು ಘನಿತ್ಯ ಮೂರಕ್ಕೂ ಅಧಿಕ ಟ್ರಿಪ್‌ ನಡೆಸಿದರೂ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರು ನೇತಾಡಿಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಚಾರ್ಮಾಡಿ ಘಾಟಿ ರಸ್ತೆಯಲ್ಲಿ ನಿಗಮದ ಬಸ್‌ ಓಡಾಟ ಸ್ಥಗಿತಗೊಂಡಿರುವುದೇ ಇದಕ್ಕೆ ಕಾರಣ ಎಂಬುದು ಕೆಎಸ್‌ಆರ್‌ಟಿಸಿಯ ವಾದ.

Advertisement

ಉಜಿರೆ-ಬೆಳ್ತಂಗಡಿ ಕಡೆಯಿಂದ ಮಂಗಳೂರು ಮತ್ತು ಇನ್ನಿತರ ಕಡೆಗೆ ನಿತ್ಯ ಸಂಚರಿಸುವವರು ಬೇಗ ತಲುಪಬೇಕೆಂಬ ಉದ್ದೇಶದಿಂದ ಚಾರ್ಮಾಡಿ ಘಾಟಿ ಮೂಲಕ ಸಾಗುವ ಎಕ್ಸ್‌ಪ್ರೆಸ್‌ ಬಸ್‌ಗಳನ್ನೇ ಆಶ್ರಯಿಸುತ್ತಿದ್ದರು. ಕಳೆದ ಮಳೆಗಾಲ ದಲ್ಲಿ ಘಾಟಿ ರಸ್ತೆ ಕುಸಿದ ಬಳಿಕ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಹೀಗಾಗಿ ಚಾರ್ಮಾಡಿ ಘಾಟಿ ಚಿಕ್ಕಮಗಳೂರು, ಬೀರೂರು, ಕಡೂರು, ದಾವಣಗೆರೆ, ಹರಪನಹಳ್ಳಿ, ಶಿವಮೊಗ್ಗ, ಬಳ್ಳಾರಿ ಮೊದಲಾದ ರೂಟ್‌ಗಳಲ್ಲಿ ಸಾಗುವ ಬಸ್‌ಗಳು ಪರ್ಯಾಯ ರಸ್ತೆಗಳ ಮೂಲಕ ಸಾಗುತ್ತಿವೆ. ಈ ಬಸ್‌ಗಳಲ್ಲಿ ಸಂಚರಿಸುವವರು ಪ್ರಸ್ತುತ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುವ ಬಸ್‌ಗಳನ್ನು ಆಶ್ರಯಿಸುತ್ತಿರುವ ಕಾರಣ ಜನಸಂದಣಿ ಹೆಚ್ಚುತ್ತಿದೆ ಎಂಬುದು ಕೆಎಸ್‌ಆರ್‌ಟಿಸಿಯ ವಾದ.

ಕೆಲವು ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಕೆಎಸ್‌ಆರ್‌ಟಿಸಿ ಮಿನಿ ಬಸ್‌ ಓಡಾಟಕ್ಕೆ ಅವಕಾಶ ನೀಡಿ ದ್ದರೂ ಮಂಗಳೂರಿಂದ ದೂರದ ಊರುಗಳಿಗೆ ತೆರಳುವ ಕೆಂಪು ಬಸ್‌ಗಳು ಪರ್ಯಾಯ ರಸ್ತೆಯಲ್ಲೇ ಸಾಗುವುದರಿಂದ ಜನದಟ್ಟಣೆಯ ಸಮಸ್ಯೆ ಬಗೆಹರಿದಿಲ್ಲ.

ಬಿ.ಸಿ. ರೋಡಿನಿಂದ ನೇತಾಡುತ್ತಾರೆ!
ಬಿ.ಸಿ. ರೋಡ್‌ ಕಡೆಗೆ ಬರುವ ಪ್ರಯಾಣಿಕರು ಬೆಳಗ್ಗಿನ ಹೊತ್ತು ಮತ್ತು ಬಿ.ಸಿ.ರೋಡಿನಿಂದ ಧರ್ಮಸ್ಥಳ ಕಡೆಗೆ ಹೋಗುವ ಪ್ರಯಾಣಿಕರು ಸಂಜೆಯ ಹೊತ್ತು ನೇತಾಡಿಕೊಂಡೇ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಸುಮಾರು ಪೂಂಜಾಲಕಟ್ಟೆ ವರೆಗಿನ ಸ್ಥಿತಿ ಹೀಗೆಯೇ ಇರುತ್ತದೆ.

Advertisement

ಬೆಳಗ್ಗೆ ಮತ್ತು ಸಂಜೆ ಉಜಿರೆ- ಬೆಳ್ತಂಗಡಿ -ಮಡಂತ್ಯಾರು ಮಧ್ಯೆಯೂ ಪ್ರಯಾಣಿಕರ ಒತ್ತಡ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇದರ ಪರಿಣಾಮ ವಾಗಿ ಬಸ್‌ ಟ್ರಿಪ್‌ ಸಮಯದಲ್ಲೂ ವ್ಯತ್ಯಾಸವಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಮಂಗಳೂರು ವಿಭಾಗ ಮಾತ್ರ
ಬೆಳ್ತಂಗಡಿಯ ಟಿಸಿ ಪಾಯಿಂಟ್‌ನ ಮಾಹಿತಿ ಪ್ರಕಾರ ಧರ್ಮಸ್ಥಳ-ಮಂಗಳೂರು (ಸ್ಟೇಟ್‌ಬ್ಯಾಂಕ್‌ ಸೇರಿ) ಮಧ್ಯೆ ಹತ್ತಾರು ಬಸ್‌ಗಳು ಮೂರಕ್ಕೂ ಅಧಿಕ ಟ್ರಿಪ್‌ ನಡೆಸುತ್ತವೆ. ಅಂದರೆ ಈ ರೂಟ್‌ನಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ 1, 2 ಮತ್ತು 3ನೇ ಡಿಪೋದ ಬಸ್‌ಗಳು ಸಂಚರಿಸುತ್ತವೆ. ಕೆಲವು ವರ್ಷಗಳ ಹಿಂದೆ ಈ ರೂಟ್‌ನಲ್ಲಿ ಪುತ್ತೂರು ವಿಭಾಗದ ಬಸ್‌ಗಳೂ ಸಂಚರಿಸುತ್ತಿದ್ದವು. ಮಂಗಳೂರಿನಿಂದ ಎಲ್ಲ ಕಡೆಗೂ ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ಗಳು ಸಂಚರಿಸಿದರೆ ಧರ್ಮಸ್ಥಳ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮಾತ್ರ ಓಡಾಡುತ್ತಿವೆ.

ಧರ್ಮಸ್ಥಳ-ಮಂಗಳೂರು ಮಧ್ಯೆ ಹೆಚ್ಚಿನ ಬಸ್‌ ಬೇಕು ಎಂಬ ಬೇಡಿಕೆ ನಮ್ಮ ಗಮನಕ್ಕೆ ಬಂದಿಲ್ಲ. ಆದರೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ಧರ್ಮಸ್ಥಳ ಬಸ್‌ಗಳಲ್ಲಿ ಪ್ರಯಾಣಿಕರ ಒತ್ತಡ ಕಂಡುಬಂದಿತ್ತು. ಪ್ರಸ್ತುತ ಘಾಟಿಯಲ್ಲಿ ಮಿನಿ ಬಸ್‌ ಓಡಾಟವಿದ್ದರೂ ಮಂಗಳೂರು ಕಡೆಯಿಂದ ಹೋಗುವ ಬಸ್‌ಗಳು ಪರ್ಯಾಯ ರಸ್ತೆಗಳಲ್ಲಿ ಓಡಾಡುತ್ತಿವೆ.
-ಅರುಣ್‌ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next