ತೆಲಸಂಗ: ಸಮೀಪದ ಖಿಲಾರದಡ್ಡಿ ಗ್ರಾಮಕ್ಕೆ ಕೊನೆಗೂ ಸೋಮವಾರ ಬಸ್ ಬಂದಿದ್ದು, ಬಸ್ಸೇ ಕಾಣದ ಗ್ರಾಮಸ್ಥರಲ್ಲಿ ಸಂಭ್ರಮವೋ ಸಂಭ್ರಮ.
ಸ್ವಾತಂತ್ರ್ಯ ದೊರೆತು 75 ವರ್ಷವಾದರೂ ಖಿಲಾರದಡ್ಡಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ. ಸದ್ಯ ಬಸ್ ಗ್ರಾಮದಲ್ಲಿ ಬರುತ್ತಿದ್ದಂತೆ ಗ್ರಾಮಸ್ಥರೆಲ್ಲ ಸೇರಿ ಚಾಲಕ, ನಿರ್ವಾಹಕ, ನಿಯಂತ್ರಣಾಧಿಕಾರಿಯನ್ನು ಸತ್ಕರಿಸಿ ಬಸ್ ಗೆ ಪೂಜೆ ಸಲ್ಲಿಸಿ, ಕುಣಿದು ಕುಪ್ಪಳಿಸಿದರು.
280ಕ್ಕೂ ಹೆಚ್ಚು ಶಾಲಾ ಮಕ್ಕಳು ಬಂದು ಹೋಗುವುದು ಸೇರಿ 16 ಕಿ.ಮೀ ನಿತ್ಯ ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುವ ಸ್ಥಿತಿ ಇತ್ತು. ಸೆ.13ರಂದು ಶಾಲೆಗೆ 16.ಕಿ.ಮೀ ನಡಿಗೆ ಅನಿವಾರ್ಯ! ಶೀರ್ಷಿಕೆಯಡಿಯಲ್ಲಿ ಉದಯವಾಣಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸಾರಿಗೆ ಸಂಸ್ಥೆಯ ಅಥಣಿ ಘಟಕದ ಅಧಿಕಾರಿಗಳು ಸೋಮವಾರದಿಂದ ಖಿಲಾರದಡ್ಡಿ ಗ್ರಾಮಕ್ಕೆ ಬಸ್ ಸೇವೆ ಆರಂಭಿಸಿದ್ದಾರೆ.
ತೆಲಸಂಗ ಸಾರಿಗೆ ನಿಯಂತ್ರಣಾಧಿಕಾರಿ ಪ್ರಕಾಶ ಭೋಸಲೆ ಮಾತನಾಡಿ, ಖಿಲಾರದಡ್ಡಿ ಗ್ರಾಮಕ್ಕೆ ಬಸ್ ವ್ಯವಸ್ಥೆಗೆ ಮೇಲಧಿಕಾರಿಗಳು ಅನುಮತಿಸಿದ್ದು ಮಾತ್ರವಲ್ಲ. ಗಣಕ ಯಂತ್ರದಲ್ಲಿ ನಿಲುಗಡೆಯ ಹೆಸರನ್ನು ಸೇರ್ಪಡೆ ಮಾಡಿಕೊಟ್ಟಿದ್ದಾರೆ. ಇನ್ನು ಮುಂದೆ ಶಾಲಾ ಮಕ್ಕಳು ಬಸ್‌ನಲ್ಲಿಯೇ ಶಾಲೆಗೆ ತೆರಳಬೇಕು. ಇವತ್ತೇ ಎಲ್ಲ ಮಕ್ಕಳಿಗೆ ಬಸ್ ಪಾಸ್ ಮಾಡಿಕೊಡಲಾಗುವುದು. ಅಲ್ಲದೆ ಒಂದು ವಾರದವರೆಗೆ ನಿಮ್ಮ ಗ್ರಾಮದಲ್ಲಿಯೇ ಉಳಿದು ಬಸ್ ನಿಲ್ಲಿಸಿ ಮಕ್ಕಳನ್ನು ಹತ್ತಿಸಿ ಕೆಲಸ ಮಾಡುವೆ. ಅಲ್ಲದೆ ಗ್ರಾಮದೊಳಗಿನ ರಸ್ತೆ ನಿರ್ಮಾಣವಾದರೆ ಕೆಲ ಬಸ್‌ಗಳನ್ನು ಒಳ ಮಾರ್ಗದಿಂದಲೇ ಓಡಿಸಲಾಗುವುದು. ಅಲ್ಲದೆ ಅಥಣಿಯಿಂದ ವಿಜಯಪುರ ಓಡಾಟಕ್ಕೆ ಕೈ ತೋರಿದಲ್ಲಿ ನಿಲ್ಲುವ ವಾಹನ ಓಡಿಸಲು ಚಿಂತನೆ ನಡೆದಿದೆ. ಈ ಎಲ್ಲ ವ್ಯವಸ್ಥೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.