ಬೆಂಗಳೂರು: ಜಾಗ ಬಿಡಲು ಹಾರ್ನ್ ಮಾಡಿದ ವಿಚಾರಕ್ಕೆ ಇಬ್ಬರು ದುಷ್ಕರ್ಮಿಗಳು ಬಿಎಂಟಿಸಿ ಬಸ್‌ನ ನಿರ್ವಾಹಕ ಮತ್ತು ಚಾಲಕನ ಮೇಲೆ ಸಾರ್ವ ಜನಿಕವಾಗಿ ಹಲ್ಲೆ ನಡೆಸಿರುವ ಘಟನೆ ಡಿ.ಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಯಲಹಂಕ ಡಿಪೋ ಬಸ್ ಚಾಲಕ ಗಗನ್ ಮತ್ತು ನಿರ್ವಾಹಕ ಶಿವಕುಮಾರ್ ಹಲ್ಲೆಗೊಳಗಾದವರು. ಈ ಸಂಬಂಧ ಗಗನ್ ಡಿ.ಜೆ.ಹಳ್ಳಿ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಗಗನ್, ಯಲಹಂಕದಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಟ್ಯಾನರಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಕಿಡಿಗೇಡಿಗಳು ಬಸ್‌ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾರೆ. ಹೀಗಾಗಿ, ಗಗನ್ ಹಾರ್ನ್ ಮಾಡಿ ಬಸ್ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ. ಅದರಿಂದ ಕೆರಳಿದ ಕಿಡಿಗೇಡಿಗಳು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದು ಕೆನರಾ ಬ್ಯಾಂಕ್ ನಿಲ್ದಾಣದ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ಗಗನ್, ಬಸ್‌ನ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳ ನುಗ್ಗಿದ ದುಷ್ಕರ್ಮಿಗಳು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕೈ ತಿರುಗಿಸಿ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಆಗ ಚಾಲಕ ಗಗನ್ ರಕ್ಷಣೆಗೆ ಧಾವಿಸಿದ ನಿರ್ವಾಹಕ ಶಿವಕುಮಾರ್‌ನನ್ನು ದುಷ್ಕರ್ಮಿಗಳು ಬಸ್‌ನಿಂದ ಕೆಳಗೆ ಎಳೆದೊಯ್ದು ಮನಬಂದಂತೆ ಸಾರ್ವಜನಿಕವಾಗಿ ಥಳಿಸಿದ್ದಾರೆ. ಸಮವಸ್ತ್ರ ಹಿಡಿದು ಎಳೆದಾಡಿ ಮುಖ, ಕತ್ತು ಮತ್ತು ಸೊಂಟದ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಶಿವಕುಮಾರ್ ನೆಲಕ್ಕೆ ಬಿದ್ದರೂ ಬಿಡದೆ
ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಪುಂಡಾಟದ ದೃಶ್ಯಾ ವಳಿಯು ಬಸ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಗಗನ್ ದೂರು ದಾಖಲಿಸಿದ್ದಾರೆ. ಗಾಯಾಳು ಶಿವಕುಮಾರ್‌ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳು ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ಚಾಲಕ ಮತ್ತು ನಿರ್ವಾಹಕನಿಗೆ ಥಳಿಸಿರುವ ಶಂಕೆಯಿದೆ. ಬಸ್‌ನ ಕ್ಯಾಮೆರಾ ಮತ್ತು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಸುಳಿವು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೂವರೆ ತಿಂಗಳಲ್ಲಿ 3 ಹಲ್ಲೆ ಪ್ರಕರಣ:
ಸೆ.8ರಂದು ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ನಿರ್ವಾಹಕನಿಗೆ ಸೂð ಡ್ರೈವರ್‌ನಿಂದ ಚುಚ್ಚಲು ಯತ್ನಿಸಿದ್ದ. ಅಕ್ಟೋಬರ್ 1ರಂದು ಐಟಿಪಿಎಲ್ ಬಳಿ ವೋಲ್ವೊ ಬಸ್ ನಿರ್ವಾಹಕ ಯೋಗೇಶ್ ಎಂಬುವರಿಗೆ ಹರ್ಷ ಎಂಬ ಪ್ರಯಾಣಿಕ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಟಿನ್ ಫ್ಯಾಕ್ಟರಿ ನಿಲ್ದಾಣದ ಬಳಿ ಅ.18ರಂದು ಹೇಮಂತ್ ಎಂಬಾತ ಬಿಎಂಟಿಸಿಯ 19ನೇ ಘಟಕದ ನಿರ್ವಾಹಕ ಸಂಗಪ್ಪಗೆ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು.