Advertisement

ಕಟಪಾಡಿ ಪೇಟೆಯೊಳಗಿನ ನಿಲ್ದಾಣಕ್ಕೆ ಬಾರದ ಬಸ್‌

01:41 PM Aug 23, 2022 | Team Udayavani |

ಕಟಪಾಡಿ: ಸಂಬಂಧ ಪಟ್ಟ ಇಲಾಖಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಟಪಾಡಿಯ ಬಸ್‌ ತಂಗುದಾಣದತ್ತ ಬಸ್‌ಗಳು ಬಾರದೆ ತಂಗುದಾಣವು ಅನಧಿಕೃತ ಪಾರ್ಕಿಂಗ್‌ ಪ್ರದೇಶವಾಗಿ ಬೆಳೆಯುತ್ತಿದ್ದು ಕಟಪಾಡಿ ಪೇಟೆಯೊಳಗೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಕಟಪಾಡಿ ಪೇಟೆಯಾದ್ಯಂತ ಎಲ್ಲೆಡೆ ಪಾರ್ಕಿಂಗ್‌ ಮಾಡಿರುವ ವಾಹನಗಳಿಂದಾಗಿ ಸಮಸ್ಯೆ ಕಾಡುತ್ತಿದೆ. ಕಟಪಾಡಿ ಬಸ್‌ ನಿಲ್ದಾಣಕ್ಕೆ ಬಸ್‌ ಬಾರದೆ ಇರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಿತ್ಯ ಪ್ರಯಾಣಿಕರು ಪಾರ್ಕಿಂಗ್‌ ಮಾಡಿದ ವಾಹನಗಳ ಎಡೆಯಲ್ಲಿ ನುಸುಳಿಕೊಂಡು ಹೋಗಿ ಖರೀದಿಸುವ ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ರಾ.ಹೆ. 66 ವಾಹನ ದಟ್ಟಣೆಯ ಅಪಾಯಕಾರಿ ಜಂಕ್ಷನ್‌ ಆಗಿ ಗುರುತಿಸಿಕೊಂಡಿದೆ. ವಯೋವೃದ್ಧರು, ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು, ಬಸ್‌ಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಯಾಸದಿಂದ ದಾಟುವಂತಹ ಅನಿವಾರ್ಯ ಪರಿಸ್ಥಿತಿ ಇದೆ. ಪೇಟೆಯೊಳಕ್ಕೆ ಎಲ್ಲ ಬಸ್‌ಗಳು ಬಾರದೇ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋ ಪಾರ್ಕಿಂಗ್‌ನಲ್ಲೇ ಪಾರ್ಕಿಂಗ್‌ !

ವ್ಯಾಪಾರಕ್ಕಾಗಿ, ವೈದ್ಯರ ಶುಶ್ರೂಷೆಗಾಗಿ, ಮೆಡಿಕಲ್‌ ಶಾಪ್‌ಗ್ಳಿಗೆ ಸಹಿತ ದೇಗುಲ, ಪ್ರಾರ್ಥನಾ ಮಂದಿರಗಳಿಗೆ ತೆರಳುವ ಮಂದಿ ತಮ್ಮ ವಾಹನ ಮಂದಿಗೆ ಕಟಪಾಡಿ ಪೇಟೆಯಲ್ಲಿನ ಬಸ್‌ ನಿಲ್ದಾಣದ ಸ್ಥಳದಲ್ಲಿ ನೋ ಪಾರ್ಕಿಂಗ್‌ ಎಂದು ಸೂಚನೆ ಹಾಕಿದ ಸ್ಥಳದಲ್ಲಿಯೇ ವಾಹನ ಪಾರ್ಕಿಂಗ್‌ ಮಾಡಿ ತೆರಳುವುದರಿಂದ ಪಾರ್ಕಿಂಗ್‌ ಸಮಸ್ಯೆ ಮತ್ತು ಬಸ್‌ ನಿಲ್ದಾಣಕ್ಕೆ ಬಸ್‌ ಬಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಈಗಾಗಲೇ ಕೆಲವು ಇಲಾಖೆಯ ಅಧಿಕಾರಿಗಳು ನೀಡಿರುವ ಭರವಸೆಯು, ಪಾಲನೆಯಾಗುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಕಟಪಾಡಿ ಬಸ್‌ ನಿಲ್ದಾಣದೊಳಕ್ಕೆ ಬಸ್ಸು ಬರುವಂತೆ ಮತ್ತು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಅಧಿಕಾರಿಗಳಿಗೆ ಮನವಿ ಸಲ್ಲಿಕೆ: ಈಗಾಗಲೇ ವಿಶೇಷ ಸಭೆ, ಗ್ರಾಮ ಸಭೆ, ಸಾಮಾನ್ಯ ಸಭೆಗಳ ತೀರ್ಮಾನದಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಕೊರೊನಾ ಲಾಕ್‌ ಡೌನ್‌ ಪೂರ್ವದಲ್ಲಿ ಬಸ್‌ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಬಸ್‌ ಸಂಚಾರವೇ ನಿಲುಗಡೆಗೊಂಡಿತ್ತು. ಇದೀಗ ಬಸ್‌ ಸಂಚಾರ ಆರಂಭಗೊಂಡಿದೆ. ಕಟಪಾಡಿ ಪೇಟೆಯೊಳಗೆ ಬಸ್‌ ಬರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. – ಇಂದಿರಾ ಎಸ್‌. ಆಚಾರ್ಯ, ಅಧ್ಯಕ್ಷರು, ಕಟಪಾಡಿ ಗ್ರಾ.ಪಂ

ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಿ: ಬಸ್‌ ಕಟಪಾಡಿ ಪೇಟೆಯ ಬಸ್‌ ನಿಲ್ದಾಣಕ್ಕೆ ಬರುವಲ್ಲಿ ರಿಕ್ಷಾದವರು, ವ್ಯಾಪಾರಸ್ಥರು, ಸಾರ್ವಜನಿಕರ ಸಹಕಾರ ನೀಡುವ ಭರವಸೆ ಇದೆ. ಕೋಟೆ-ಮಟ್ಟು ಭಾಗಕ್ಕೆ ತೆರಳುವ ಬಸ್‌ಗಳು ಬರುತ್ತಿದೆ. ಕಾಪು, ಶಿರ್ವ ಭಾಗದಿಂದ ಬರುವ ಬಸ್‌ಗಳು ಪ್ರಯಾಣಿಕರನ್ನು ಕಟಪಾಡಿ ಪೇಟೆಯೊಳಗಿನ ಬಸ್‌ ನಿಲ್ದಾಣದಿಂದ ಹತ್ತಿಸಿಕೊಂಡು ಹಳೆ ಎಂಬಿಸಿ ರಸ್ತೆಯ ಮೂಲಕ ರಾ.ಹೆ. ತಲುಪಿ ಉಡುಪಿಯತ್ತ ತೆರಳಿದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ. – ಅಶೋಕ್‌ ರಾವ್‌, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಕಟಪಾಡಿ ಗ್ರಾ.ಪಂ

ಸಾರ್ವಜನಿಕರಿಗೆ ಅನಾನುಕೂಲ: ಗ್ರಾ.ಪಂ. ಮಾರ್ಕಿಂಗ್‌ ಮಾಡಿ ಬಸ್‌ ಬರುವಂತೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಇದೀಗ ಮಾರ್ಕಿಂಗ್‌ ಮಾತ್ರ ಕಾಣುತ್ತಿದ್ದು, ಬಸ್‌ಗಳು ಪೇಟೆಯೊಳಗೆ ಬರುತ್ತಿಲ್ಲ. ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌ ಕಾಣುತ್ತಿದ್ದು, ವ್ಯವಸ್ಥೆಗೆ ವಿರುದ್ಧವಾಗಿದೆ. ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸುವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ದಿಟ್ಟ ಹೆಜ್ಜೆ ಇರಿಸಬೇಕಿದೆ.- ಸಂತೋಷ್‌, ಕಟಪಾಡಿ, ನಿತ್ಯ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next