Advertisement

ಶ್ಮಶಾನದ ಒಡೆದ ಮಡಕೆಗಳೇ ಪಕ್ಷಿಗಳ ನೀರಿನ ಪಾತ್ರೆ

06:10 AM Apr 13, 2018 | |

ಕಟಪಾಡಿ: ಬೇಸಗೆ ಬಂತೆಂದರೆ ಮನುಷ್ಯನಿಗೆ ಕುಡಿಯುವ ನೀರು ಸಿಗದೇ ಇರುವ ಪರಿಸ್ಥಿತಿ ಇರುವಾಗ, ಪಕ್ಷಿಗಳ ಪಾಡು ಹೇಳುವಂತಿಲ್ಲ. ಬಿಸಿಲಿಲಿಂದ ಕಂಗೆಟ್ಟ ಬಾನಾಡಿಗಳಿಗೆ ಶ್ಮಶಾನದಲ್ಲಿ ಬಳಸಿ ಎಸೆದ ಮಡಕೆಯಲ್ಲೇ ನೀರುಣಿಸುವ ಮೂಲಕ ಕಟಪಾಡಿ ಕೋಟೆಯ ವಿನೋಭನಗರದ ಶ್ಮಶಾನ ಮೇಲ್ವಿಚಾರಕ ರತ್ನಾಕರ ಕೋಟ್ಯಾನ್‌ ಜೀವಪ್ರೇಮ ಮೆರೆಯುತ್ತಿದ್ದಾರೆ.
 
ಅಂತ್ಯಕ್ರಿಯೆಗೆ ಬಳಕೆಯಾದ ಮಡಕೆಗಳನ್ನು ಯಾರೂ ಪುನಃ ಬಳಕೆ ಮಾಡುವುದಿಲ್ಲ. ಈ ಮಡಕೆಗಳನ್ನು ಕೋಟ್ಯಾನ್‌ ಅವರು ಸಂಗ್ರಹಿಸಿ, ನೀರು ತುಂಬಿಸಿ ಶ್ಮಶಾನದ ಆವರಣ ಗೋಡೆಯಲ್ಲಿ, ಹೂದೋಟದಲ್ಲಿ, ಎತ್ತರದ ಸ್ಥಳಗಳಲ್ಲಿ, ಗಿಡ-ಮರಗಳ ಬುಡದಲ್ಲಿ ಇರಿಸಿ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಇಲ್ಲಿ ಬಾಯಾರಿದ ಬೆಕ್ಕು, ಮುಂಗುಸಿ ಮೊದಲಾದ ಪ್ರಾಣಿಗಳು ಕೂಡಾ ನೀರು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತವೆ.


ಉಳಿದ ಆಹಾರವೂ ಪ್ರಾಣಿ-ಪಕ್ಷಿಗಳಿಗೆ 
ಶ್ಮಶಾನ ಅಂದರೆ ನಿರ್ಜನ ಪ್ರದೇಶ. ಯಾರಾದರೂ ಮೃತರಾದರೆ ಮಾತ್ರ ಇಲ್ಲಿ ಜನಸಂದಣಿ ಇರುತ್ತದೆ. ಹಾಗಾಗಿ ಎಲ್ಲ ಪ್ರಾಣಿ ಪಕ್ಷಿಗಳು ನಿರ್ಭೀತವಾಗಿ ಬಂದು ನೀರು ಕುಡಿಯುವುದಲ್ಲದೇ, ಶ್ಮಶಾನದ ಗಿಡಗಳ ಹಣ್ಣನ್ನೂ ತಿನ್ನುತ್ತವೆ. ರತ್ನಾಕರ ಕೋಟ್ಯಾನ್‌ ಅಂತ್ಯ ಸಂಸ್ಕಾರದ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟು, ಅದನ್ನು ವ್ಯರ್ಥಗೊಳಿಸದೆ ಪ್ರಾಣಿ ಪಕ್ಷಿಗಳಿಗೆ ಉಣಬಡಿಸುತ್ತಾರೆ. 

Advertisement

ಎಲ್ಲರೂ ಕೈ ಜೋಡಿಸಿ
ನೀರಿನ ಮೂಲಗಳು ಬತ್ತಿರುವಾಗ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದು ಕಷ್ಟಕರ. ಕೋಟ್ಯಾನರಂತೆ ಎಲ್ಲರೂ ತಮ್ಮ ಮನೆಗಳಲ್ಲಿ  ನೀರು ಇರಿಸಿದರೆ ಉತ್ತಮ ಕಾರ್ಯವಾಗುತ್ತದೆ 
–  ಡಾ| ದಯಾನಂದ ಪೈ, ಸಹಾಯಕ ನಿರ್ದೇಶಕರು, ಪಶುವೈದ್ಯಕೀಯ  ಆಸ್ಪತ್ರೆ, ಕಾಪು

ಎಲ್ಲರಿಗೂ ಮಾದರಿ
ಬೇಸಗೆಯಲ್ಲಿ ಬಸವಳಿದ ಪಕ್ಷಿಗಳಿಗೆ ನೀರುಣಿಸುತ್ತಿರುವುದು ರತ್ನಾಕರ ಕೋಟ್ಯಾನ್‌ ಮಾಡುತ್ತಿರುವ  ಪುಣ್ಯದ ಕೆಲಸ. ಇವರ ಪಕ್ಷಿ-ಪ್ರಾಣಿ ಪ್ರೇಮ ಎಲ್ಲರಿಗೂ ಮಾದರಿ. 
– ಜಗದೀಶ್‌ ಕಾಮತ್‌, 
ಕಟಪಾಡಿ.

– ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next