Advertisement

ಪಂಚಾಯತ್‌ ನಿರ್ಮಿಸಿದ ಕಟ್ಟಡ ಖಾಸಗಿ ಜಾಗದಲ್ಲಿ?

12:26 AM Feb 24, 2022 | Team Udayavani |

ಉಪ್ಪಿನಂಗಡಿ: ತನಗೆ ಸೇರಿದ ಜಾಗದಲ್ಲಿ ಪಂಚಾಯತ್‌ ಬಲವಂತವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದು, ತನಗೆ ನ್ಯಾಯ ಒದಗಿಸಬೇಕೆಂದು ಕೋರ್ಟ್‌ ಮೊರೆ ಹೋಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ, ಇದೀಗ ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಡೆದಿದೆ.

Advertisement

ತೆಕ್ಕಾರು ಗ್ರಾಮದ ಬಾಜಾರ ಮನೆ ನಿವಾಸಿ ದಿವಂಗತ ನೇಮು ನಾಯ್ಕ ಅವರ ಪತ್ನಿ ಯಮುನಾ ಪೊಲೀಸರಿಗೆ ದೂರು ನೀಡಿದ್ದು, ತೆಕ್ಕಾರು ಗ್ರಾಮದಲ್ಲಿನ ತನ್ನ ಹಕ್ಕಿನ 103/1ಎ2 ರಲ್ಲಿನ 0.69 ಎಕ್ರೆ ಭೂಮಿಗೆ ಪಂಚಾಯತ್‌ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆರು ತಿಂಗಳ ಹಿಂದೆ ಅಕ್ರಮವಾಗಿ ಪ್ರವೇಶಿಸಿ ಬುಲ್ಡೋಜರ್‌ ತಂದು ಕೃಷಿಯನ್ನು ಕೂಡ ನಾಶ ಮಾಡಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ. ಆ ವೇಳೆ ಪ್ರಶ್ನಿಸಿದ ನನ್ನನ್ನು, ನನ್ನ ಜಾತಿಯ ಕಾರಣದಿಂದ ನಿಂದಿಸಿ ಪ್ರಶ್ನಿಸಿದರೆ ಈ ಊರಿನಲ್ಲೇ ಇರಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿದ್ದಾರೆಂದು ಪೊಲೀಸ್‌ ಉಪ ಅಧೀಕ್ಷಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದು ತಾನು 40 ವರ್ಷಗಳಿಂದ ಸ್ವಾಧೀನ ಹೊಂದಿದ ಭೂಮಿಯಾಗಿದೆ ಎಂದು ಸಂಬಂಧಿತ ದಾಖಲೆಗಳ ಸಹಿತ ಪುತ್ತೂರು ಸಹಾಯಕ ಕಮಿಷನರ್‌ ನ್ಯಾಯಾಲಯದಲ್ಲಿ ಮಹಿಳೆ ದಾವೆ ಹೂಡಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್‌ ಮಧ್ಯಾಂತರ ಆದೇಶ ಜಾರಿಗೊಳಿಸಿ, ಗ್ರಾ.ಪಂ. ಮೂಲ ದಾಖಲೆಯನ್ನು ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.

ಈ ಮಧ್ಯೆ ತನ್ನ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವು ತನಗೇ ಸೇರಿದ್ದೆಂದು ವಾದಿಸಿ ಯಮುನಾ ಅವರ ಕುಟುಂಬವು ಸದ್ರಿ ಕಟ್ಟಡಕ್ಕೆ 2-3 ದಿನಗಳ ಹಿಂದೆ ಪ್ರವೇಶಗೈದು ವಾಸ್ತವ್ಯವನ್ನು ಆರಂಭಿಸಿದೆ.

ಏನಿದು ಪ್ರಕರಣ?
ತೆಕ್ಕಾರು ಗ್ರಾ. ಪಂ. ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ 20 ಸೆಂಟ್ಸ್‌ ಭೂಮಿಯನ್ನು ಮಂಜೂರು ಮಾಡಿದ್ದು, ಸದ್ರಿ ಮಂಜೂರಾದ ಭೂಮಿಯು ಸರ್ವೆ ನಂಬ್ರ 64/ 1ರಲ್ಲಿ ಇದೆ ಎನ್ನಲಾಗಿದೆ. ಯಮುನಾ ಅವರು ಆಪಾದಿಸಿರುವಂತೆ ಸರ್ವೆ ನಂಬ್ರದ ಭೂಮಿಯು ಕಟ್ಟಡ ನಿರ್ಮಿಸುತ್ತಿರುವ ಸ್ಥಳಕ್ಕಿಂತ ಸುಮಾರು 1 ಕಿ.ಮೀ. ದೂರದಲ್ಲಿದೆ. ಪಂಚಾಯತ್‌ನವರು ತನ್ನ 103/ 1ಎ2 ಸರ್ವೆ ನಂಬರ್‌ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ನಾನು ಮೊದಲೇ ಆಕ್ಷೇಪಿಸಿದಾಗ ನನಗೆ ಬೆದರಿಕೆ ಹಾಕಲಾಗಿದ್ದು, ಆದುದರಿಂದ ನ್ಯಾಯಾಲಯಕ್ಕೆ ಹೋಗಬೇಕಾಯಿತು ಎನ್ನುತ್ತಾರೆ ಯಮುನಾ.

Advertisement

ತಾವು ನಿರ್ಮಿಸಿದ ಕಟ್ಟಡಕ್ಕೆ ಮಹಿಳೆಯ ಕುಟುಂಬ ಅಕ್ರಮ ಪ್ರವೇಶ ಮಾಡಿ ಅಲ್ಲಿಯೇ ವಾಸವಾಗಿದ್ದಾರೆ ಎಂದು ಪಂಚಾಯತ್‌ ಆಡಳಿತ ದೂರು ನೀಡಿದ್ದು, ಮಂಗಳವಾರ ಎರಡೂ ತಂಡಗಳನ್ನು ಪೊಲೀಸ್‌ ಉಪ ಅಧೀಕ್ಷಕಿ ಗಾನ ಪಿ. ಕುಮಾರ್‌ ಅವರು ಕರೆದು ವಿಚಾರಣೆ ನಡೆಸಿದ್ದು, ಮೊದಲು ಸರಕಾರಿ ಸರ್ವೇಯರ್‌ಗಳಿಂದ ಅಳತೆ ಮಾಡಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next