ಮೈಸೂರು: ಆದಾಯ ತೆರಿಗೆ ಇಲಾಖೆ ದಾಳಿಗೆ ನಮ್ಮ ವಿರೋಧ ಇಲ್ಲ. ಆದರೆ, ಚುನಾವಣೆ ಸಂದರ್ಭದಲ್ಲೇ ಏಕೆ ದಾಳಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಯವರು ಬಿಜೆಪಿ ನಾಯಕರ ಮನೆಗಳ ಮೇಲೇಕೆ ದಾಳಿ ಮಾಡಲಿಲ್ಲ? ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹತ್ತಿರ ದುಡ್ಡಿಲ್ಲವಾ?
ಶಾಸಕರುಗಳನ್ನು ಸೆಳೆಯಲು 25 ಕೋಟಿ ರೂ. ಆಫರ್ ನೀಡಿದ್ದರು. ಕೆ.ಎಸ್. ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಿಷನ್ ಸಿಕ್ಕಿತ್ತು. ಅಂಥವರ ಮನೆಗಳ ಮೇಲೇಕೆ ದಾಳಿ ಮಾಡಲಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದರು.
ಮೋದಿ ವಿರುದ್ಧ ವಾಗಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ, ಸಂಸದ ಪ್ರತಾಪ್ ಸಿಂಹ ಕೂಡ ಅದೇ ಹಾದಿಯಲ್ಲಿ ಹೋಗುತ್ತಿದ್ದಾನೆ ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.
ಪುಸ್ತಕ ಪ್ರಿಂಟ್ ಮಾಡಿಸಿಕೊಂಡು ಎಲ್ಲವನ್ನೂ ನಾನೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಮೈಸೂರು-ಬೆಂಗಳೂರು ಹೆದ್ದಾರಿ ನಾನೇ ಮಾಡಿದ್ದು ಅಂತ ಪುಸ್ತಕದಲ್ಲಿ ಬರೆದು ಕೊಂಡಿದ್ದಾನೆ. ಮೈಸೂರಿನ ಫ್ಲೈಓವರ್ ಮೇಲೆ ಓಡಾಡಿ ನಾನೇ ಮಾಡಿಸಿದ್ದು ಅಂತಾನೇ ಎಂದು ಸಿದ್ದರಾಮಯ್ಯ ಟೀಕಿಸಿದರು.