ಸುರಪುರ: ನಗರದಲ್ಲಿ ಬೌದ್ಧ ಬಿಕ್ಕು ಸಂಘ ಹಾಗೂ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಬುದ್ಧ ವಿಹಾರದಲ್ಲಿ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಗುರುವಾರ ಅದ್ಧೂರಿಯಾಗಿ ಜರುಗಿತು.
ನಗದ ಬುದ್ಧ ಗವಿಯಲ್ಲಿನ ಗೌತಮ ಬುದ್ಧನ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೌದ್ದ ಬಿಕ್ಕು ಸಂಘ ಮತ್ತು ಟ್ರಸ್ಟ್ ವತಿಯಿಂದ 3 ಲಕ್ಷ ರೂ. ವೆಚ್ಚದಲ್ಲಿ ಗೌತಮ ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಬೆಳಗ್ಗೆ ಡಾ| ಅಂಬೇಡ್ಕರ್ ವೃತ್ತದಲ್ಲಿ ಪಂಚಶೀಲ ಧ್ವಜಾರೋಹಣ ನೆರವೇರಿಸಲಾಯಿತು. ಭಂತೇಜಿಗಳ ನೇತೃತ್ವದಲ್ಲಿ ಗೌತಮ ಬುದ್ಧರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಗರದೆಲ್ಲೆಡೆ ಪಂಚಶೀಲ ಧ್ವಜಗಳು ರಾರಾಜಿಸಿದವು. ಗೌತಮ ಬುದ್ಧರ ತ್ರೀಸರಣ ಮಂತ್ರ ಪಠಣ ನಡೆಯಿತು.
ಗೌತಮ ಬುದ್ಧ ಮಹಾರಾಜಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿದವು. ನಂತರ ಗೋಲ್ಡ್‌ನ್ ಕೇವ್ ಬುದ್ಧ ಗವಿಯಲ್ಲಿ ಬೌದ್ಧ ಬಿಕ್ಕು ವರಜ್ಯೋತಿ ಭಂತೇಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ತ್ರೀಸರಣ ಮಂತ್ರ ಪಠಿಸಿ ಕಂಚಿನ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದರು. ಬೌದ್ಧ ಅನುಯಾಯಿಗಳು ಹೂ, ಹಣ್ಣು ಸರ್ಮಪಿಸಿದರು. ಸರದಿ ಸಾಲಿನಲ್ಲಿ ನಿಂತು ಬುದ್ಧನ ಮೂರ್ತಿ ದರ್ಶನ ಪಡೆದರು.
ವರಜ್ಯೋತಿ ಭಂತೇಜಿ ಬುದ್ದ ಸಂದೇಶ ನೀಡಿ, ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಅಪಸ್ವರ. ಅಸಮಾಧಾನ ಬೇಡ. ಸಮಸ್ಯೆ ಇಲ್ಲಿಗೆ ಮುಗಿದಿಲ್ಲ. ದುಷ್ಕರ್ಮಿಗಳ ವಿರುದ್ಧ ನಡೆಯವ ಕಾನೂನಾತ್ಮಕ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅನ್ಯತಾ ಭಾವಿಸಬಾರದು. ಭಗ್ನಗೊಂಡ ಮೂರ್ತಿ ಗವಿಯಲ್ಲಿರುವುದು ಸರಿಯಲ್ಲ. ಇದು ಬೌದ್ಧ ಧರ್ಮಕ್ಕೆ ವಿರುದ್ಧವಾದದ್ದು. ಹೀಗಾಗಿ ನೂತನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇನ್ನೂ ಮುಂದೆ ನಿತ್ಯವು ಬುದ್ಧನ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳಿ ಎಂದರು.
ಬುದ್ಧ ಘೋಷ ದೇವಿಂದ್ರ ಹೆಗ್ಗಡೆ ಮಾತನಾಡಿ, ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಅ.21ರಂದು ನಡೆಯುವ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.
ನಾಗಣ್ಣ ಕಲ್ಲದೇವನಳ್ಳಿ, ಬಾಬೂರಾವ ಭೂತಾಳಿ, ನೀಲಕಂಠ ಬಡಿಗೇರ, ಮಲ್ಲೇಶಪ್ಪ ದೇವದುರ್ಗ, ನಾಗಣ್ಣ ಬಡಿಗೇರ ಮಾತನಾಡಿದರು. ದೇವದುರ್ಗ, ಶಹಾಪುರ, ಯಾದಗಿರಿ, ಹುಣಸಗಿ ಸೇರಿದಂತೆ ವಿವಿಧ ತಾಲೂಕಿನ ಬುದ್ಧ ಅನುಯಾಯಿಗಳು, ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಮಹಿಳೆಯರು ಭಾಗವಹಿಸಿದ್ದರು.