ಚಳ್ಳಕೆರೆ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಮಾಜ ಘಾತುಕ ಶಕ್ತಿಗಳನ್ನು ಸಹ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಕರ್ತವ್ಯವಾಗಿದೆ. ಪ್ರತಿಯೊಬ್ಬರಿಗೂ ಭದ್ರತೆಯನ್ನು ನೀಡುವ ಮೂಲಕ ಪೊಲೀಸ್ ಇಲಾಖೆ ತನ್ನದೇಯಾದ ವೈಶಿಷ್ಟ್ಯಾತೆ ಕಾಪಾಡಿಕೊಂಡು ಬಂದಿದೆ ಎಂದು ಡಿವೈಎಸ್ಪಿ ಎಸ್. ರೋಷನ್ ಜಮೀರ್ ತಿಳಿಸಿದರು.
ಇಲ್ಲಿನ ಎಚ್ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಚಳ್ಳಕೆರೆ ಉಪವಿಭಾಗದ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡಾಕ್ಷೇತ್ರ ಉತ್ತೇಜಿಸುವ ಸೃಷ್ಠಿಯಿಂದ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ನೀಡಿದ್ದು, ಕ್ರೀಡೆಯನ್ನು ಇಲಾಖೆಯ ಒಂದು ಭಾಗವವಾಗಿ ಸ್ವೀಕರಿಸಲಾಗಿದೆ ಎಂದರು.
ಚಳ್ಳಕೆರೆ ಉಪವಿಭಾಗ ಇತ್ತೀಚಿನ ದಿನಗಳಲ್ಲಿ ಕ್ರೀಡಾಕ್ಷೇತ್ರದಲ್ಲೂ ಸಹ ತನ್ನದೇಯಾದ ಸಾಧನೆಯನ್ನು ದಾಖಲಿಸಿದೆ. ಉತ್ತಮ ಕ್ರೀಡಾಪಟುವಿಗೆ ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚು ಗೌರವ ನೀಡುತ್ತಾರೆ. ಉದ್ಯೋಗಾವಕಾಶಗಳು ಸಹ ದೊರೆಯಲಿವೆ. ಈ ನಿಟ್ಟಿನಲ್ಲಿ ಎಲ್ಲಾ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮುಂದಾಗಬೇಕೆಂದರು. ಜ. 26ರಂದು ಜಿಲ್ಲಾ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಚಳ್ಳಕೆರೆ ಉಪವಿಭಾಗದಿಂದ ತಂಡವನ್ನು ರಚಿಸಲಿದ್ದು, ಈ ನಿಟ್ಟಿನಲ್ಲಿ ಈ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಜಿಲ್ಲಾ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಸುವ ಜಿಲ್ಲಾ ರಕ್ಷಣಾಕಾರಿಗಳ ಸೂಚನೆ ಮೇರೆಗೆ ಉತ್ತಮ ತಂಡವನ್ನು ರಚಿಸಿ ತರಬೇತಿ ನೀಡಲಾಗುವುದು. ಚಳ್ಳಕೆರೆ ಉಪವಿಭಾಗದಿಂದ ಒಟ್ಟು 16 ತಂಡಗಳು ಭಾಗವಹಿಸಿದ್ದು, ಅಂತಿಮ ಪಂದ್ಯದಲ್ಲಿ ಚಳ್ಳಕೆರೆ ಪ್ರಥಮ ಸ್ಥಾನವನ್ನು ಮೊಳಕಾಲ್ಮೂರು ತಂಡ ದ್ವಿತೀಯ ಸ್ಥಾನ ಪಡೆದಿದೆ. ಕ್ರೀಡೆಯಲ್ಲಿ ಹೆಚ್ಚು ಪರಿಶ್ರಮವಿದ್ದು, ಪ್ರತಿಯೊಬ್ಬ ಕ್ರೀಡಾಪಟುವೂ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಆಟವನ್ನು ಆಡಬೇಕಿದೆ. ಪೊಲೀಸ್ ಇಲಾಖೆ ಸದಾಕ್ರೀಡಾಪಟುಗಳ ಬೆಂಬಲಕ್ಕೆ ಸಿದ್ದವಿದೆ ಎಂದರು.
ಮೊಳಕಾಲ್ಮೂರು ಪಿಎಸ್‌ಐ ಎನ್.ವೆಂಕಟೇಶ್ ಮಾತನಾಡಿ, ಚಳ್ಳಕೆರೆ ಉಪವಿಭಾಗ ಪಂದ್ಯಾವಳಿ ಉತ್ತಮ ಯಶಸ್ಸುಕಂಡಿದೆ. ಕೇವಲ ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ 16 ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದೆ. ಎಲ್ಲಾ ತಂಡಗಳು ತಮ್ಮದೇಯಾದ ಪ್ರತಿಭೆಯನ್ನು ಪ್ರದರ್ಶಿಸಿವೆ ಎಂದರು.
ಪ್ರಾರಂಭದಲ್ಲಿ ಪಿಎಸ್‌ಐ ಎನ್. ಗುಡ್ಡಪ್ಪ ಸ್ವಾಗತಿಸಿದರು. ಪಿಎಸ್‌ಐ ಮೋಹನ್‌ಕುಮಾರ್ ನಿರೂಪಿಸಿದರು. ಪಿಎಸ್‌ಐ ರಘುನಾಥ ವಂದಿಸಿದರು.