Advertisement

ಎರಡು ವರ್ಷಗಳಾದರೂ ಉದ್ಘಾಟನೆಯಾಗದ ಸೇತುವೆ

01:30 AM Jan 30, 2020 | Team Udayavani |

ಉಡುಪಿ: ಸ್ವರ್ಣಾ ನದಿಗೆ ಅಡ್ಡ‌ವಾಗಿ ಕೊಳಲಗಿರಿ ಪರಾರಿ- ಪೆರಂಪಳ್ಳಿ ಶಿಂಬ್ರ ಸೇತುವೆ ನಿರ್ಮಾಣಗೊಂಡು ಎರಡೂವರೆ ವರ್ಷಗಳು ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸೇತುವೆ ಬಳಕೆ ಮುಕ್ತವಾಗದ ಹಿನ್ನೆಲೆಗೆ ಸ್ಥಳೀಯರು ಪ್ರತಿಭಟನೆಗೆ ಸಿದ್ಧರಾಗುತ್ತಿದ್ದಾರೆ.

Advertisement

2016ರಲ್ಲಿ ಕಾಮಗಾರಿ ಚಾಲನೆ
ಹಾವಂಜೆ ಜನರು ಕೇವಲ 3 ಕಿ.ಮೀ. ದೂರದಲ್ಲಿ ಇರುವ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ತಲುಪಲು 18 ಕಿ.ಮೀ. ಸುತ್ತು ಬಳಸಿ ಬರಬೇಕಿದೆ. ಇದಕ್ಕಾಗಿ ಪೆರಂಪಳ್ಳಿಯ ಶೀಂಬ್ರ ಪರಿಸರದಲ್ಲಿನ ಸ್ವರ್ಣಾ ನದಿಗೆ ಅಡ್ಡವಾಗಿ ಪರಾರಿಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಗೆ 2016ರಲ್ಲಿ ಚಾಲನೆ ನೀಡಲಾಗಿತ್ತು. ಎರಡು ವರ್ಷಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಹಣಕಾಸಿನ ತೊಂದರೆಯಿಂದ 2018ರ ಮಾರ್ಚ್‌ ನಿಂದ ಸಂಪೂರ್ಣ ಸ್ಥಗಿತಗೊಂಡಿದೆ.

10ರಿಂದ 16.22 ಕೋ.ರೂ.ಗೆ ಏರಿಕೆ!
ಆರಂಭದಲ್ಲಿ ಸೇತುವೆ ನಿರ್ಮಾಣಕ್ಕೆ ಲೋಕೋ ಪಯೋಗಿ ಇಲಾಖೆಯಿಂದ 10 ಕೋ.ರೂ. ಅನುದಾನ ಮಂಜೂರು ಮಾಡಲಾಗಿತ್ತು. ಈಗ ಮೂರೂವರೆ ವರ್ಷಗಳಲ್ಲಿ 16.22 ಕೋಟಿ ರೂ.ಗೆ ಏರಿಕೆಯಾಗಿದೆ. ಕಾಮಗಾರಿ ಶೇ.100 ಮುಕ್ತಾಯವಾಗಿ ಸೇತುವೆ ಪೂರ್ಣಗೊಂಡರೂ ಸಂಪರ್ಕ ಕಲ್ಪಿಸುವ ಕೂಡು ಸೇತುವೆಗಳ ಭೂ ಖರೀದಿ ಆಗಿಲ್ಲ. ಕೊಳಲಗಿರಿಯಲ್ಲಿ ಈಗಾಗಲೇ ಮಣ್ಣಿನ ಕೂಡು ರಸ್ತೆ ನಿರ್ಮಾಣ ಮಾಡಲಾಗಿದ್ದು, ಕಾಂಕ್ರೀಟ್‌ ಹಾಕಿಲ್ಲ.

ಶೀಂಬ್ರದಲ್ಲಿ ಸಂತ್ರಸ್ತರಿಗೆ ಹಣ ನೀಡದ ಹಿನ್ನೆಲೆಯಲ್ಲಿ ಯಾವುದೇ ಕಾಮಗಾರಿ ಆಗಿಲ್ಲ. ಕೂಡು ರಸ್ತೆಗೆ ಶೀಂಬ್ರದಲ್ಲಿ 85 ಸೆಂಟ್ಸ್‌ ಹಾಗೂ ಕೊಳಲಗಿರಿಯಲ್ಲಿ 2.23 ಎಕರೆ ಭೂ ಸ್ವಾಧೀನಕ್ಕಾಗಿ ಇಲಾಖೆಯಿಂದ 25 ಲ.ರೂ. ಇಡಲಾಗಿತ್ತು. ಆದರೆ ಮಾರುಕಟ್ಟೆ ಬೆಲೆ ಅಂದಾಜಿಸಿದಾಗ 3.22ಕೋ. ರೂ. ನೀಡಬೇಕಾಗುತ್ತದೆ.

ಪೇತ್ರಿ, ಕೊಕ್ಕರ್ಣೆಗೆ ಹತ್ತಿರ
ಸೇತುವೆ ಕಾಮಗಾರಿ ಪೂರ್ಣಗೊಂಡರೆ ಕೊಳಲ ಗಿರಿ, ಹಾವಂಜೆ, ಪೇತ್ರಿ, ಕೊಕ್ಕರ್ಣೆ, ಮಂದಾರ್ತಿ ಸೇರಿದಂತೆ ಇತರ ಸುತ್ತಮುತ್ತಲಿನ ಜನರಿಗೆ ಉಪಯೋಗವಾಗಲಿದೆ. ರಾ.ಹೆ. 66ರನ್ನು ಸಂಪರ್ಕಿಸದೆ ನೇರವಾಗಿ ಮಣಿಪಾಲವನ್ನು ತಲುಪ ಬಹುದು. ಹೊಸ ಸೇತುವೆ 202.96 ಮೀ. ಉದ್ದ, ತಲಾ 25.37 ಮೀ. 8 ಉದ್ದದ ಅಂಕಣಗಳನ್ನು ಹೊಂದಿದೆ.

Advertisement

ಸ್ಥಳೀಯರಿಂದ ಪ್ರತಿಭಟನೆ ಎಚ್ಚರಿಕೆ
ಭೂಸ್ವಾಧೀನ ವಿಚಾರದಿಂದ ಸೇತುವೆ ಬಾಕಿ ಕೆಲಸವನ್ನು ನಿಲ್ಲಿಸಲಾಗಿದೆ. ಶಾಸಕರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೇತುವ ಕಾರ್ಯದ ಮುತುವರ್ಜಿವಹಿಸಬೇಕು ಬೇಕು. 15ದಿನಗಳೊಳಗೆ ಈ ಕುರಿತು ಸ್ಪಷ್ಟ ಮಾಹಿತಿ ನೀಡದೆ ಹೋದರೆ ಗ್ರಾಮಸ್ಥರು ಪಕ್ಷಭೇದ ಮರೆತು ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

6.22 ಕೋ.ರೂ.
ಹೆಚ್ಚುವರಿ ಅನುದಾನ
ಕಳೆದ ಬಾರಿ 2019ರಲ್ಲಿ ಸ್ಥಳೀಯರಿಂದ ಭೂಮಿ ಖರೀದಿಸಿ ಹಾಗೂ ಬಾಕಿ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚಿನ ಅನುದಾನ ಕೋರಿ ಸಚಿವ ಸಂಪುಟಕ್ಕೆ 6.22 ಕೋಟಿ ರೂ. ಹೆಚ್ಚುವರಿ ಅನುದಾನದ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದರು.

ಪ್ರತಿಭಟನೆ
ಶೀಘ್ರದಲ್ಲಿ ಭೂಸ್ವಾಧೀನಗೊಳಿಸಿ ಕೂಡು ರಸ್ತೆ ನಿರ್ಮಿಸಿ ಸೇತುವೆ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ 15ದಿನಗಳಲ್ಲಿ ಪಕ್ಷಭೇದ ಮರೆತು ಗ್ರಾಮಸ್ಥರ ಜತೆ ಸೇರಿ ಪ್ರತಿಭಟನೆ ಮಾಡುತ್ತಿವೆ.
-ರತ್ನಾಕರ್‌,
ಜಿಲ್ಲಾ ಸಂಘಟನಾ ಕಾರ್ಯದರ್ಶಿ,ಜಯಕರ್ನಾಟಕ.

ಅನುಕೂಲ
ಕೊಳಲಗಿರಿ, ನೀಲಾವರ, ಕುಂಜಾಲು, ಕುಕ್ಕೆಹಳ್ಳಿ, ಹಾವಂಜೆ ಭಾಗದ ಜನರಿಗೆ ಉಡುಪಿ, ಮಣಿಪಾಲ ಸಂಪರ್ಕಿಸಲು ಸಾಕಷ್ಟು ಅನುಕೂಲವಾಗುತ್ತದೆ. ಈ ಸೇತುವೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿದರೆ ಸಮಯ, ಖರ್ಚು ಎರಡೂ ಉಳಿತಾಯವಾಗುತ್ತದೆ.
-ಶಶಾಂಕ್‌,ವಿದ್ಯಾರ್ಥಿ

ಅನುದಾನವಿಲ್ಲ
ಲೋಕೋಪಯೋಗಿ ಸಚಿವರ‌ ಗಮನಕ್ಕೆ ತರಲಾಗಿದೆ. ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಾಧ್ಯವಾದರೆ ಅವರ ಗಮನಕ್ಕೆ ತರಲಾಗುತ್ತದೆ. ಸರಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡಿಲ್ಲ.
-ಜಗದೀಶ್‌ ಭಟ್‌,ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next