ಬಸವಕಲ್ಯಾಣ: ಗ್ರಂಥಾಲಯಗಳು ಓದುಗರ ಮತ್ತು ಕೃತಿಗಳ ನಡುವೆ ಆಪ್ತವಾದ ಸಂಬಂಧ ಬೆಳೆಸುತ್ತವೆ. ಜತೆಗೆ ನಿರಂತರ ಸಂಬಂಧ ಇರಿಸಿಕೊಳ್ಳಬೇಕು. ವ್ಯಕ್ತಿಯ ವ್ಯಕ್ತಿತ್ವ ಬೆಳೆಸುವ ಗುಣ ಪುಸ್ತಕಕ್ಕಿದೆ ಎಂದು ಹುಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ವಿಷಮ ಸ್ಥಿತಿ ಹಾಗೂ ಲಾಕ್ ಡೌನ್‌ನಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಪುಸ್ತಕಗಳು ಸಂಗಾತಿಗಳಾಗಿದ್ದವು.
ಸಾರ್ವಜನಿಕ ಗ್ರಂಥಾಲಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಿದ್ದು, ಸದುಪಯೋಗ ಪಡೆಯಬೇಕು ಎಂದರು. ಅಕ್ಕಮಹಾದೇವಿ ಕಾಲೇಜು ಉಪನ್ಯಾಸಕ ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯ, ಸಂಸ್ಕೃತಿ, ಸಮಾಜ, ಮಾನವ ವರ್ತನೆ, ರಾಜಕಾರಣ, ಆರ್ಥಿಕತೆಗಳ ಕ್ರಮಬದ್ಧ ವಿಶ್ಲೇಷಣೆ ಮಾಡಲು ಹಾಗೂ ಪ್ರಬುದ್ಧ ಚಿಂತನಾ ಕ್ರಮ ಬೆಳೆಸಿಕೊಳ್ಳಲು ಶ್ರೇಷ್ಠ ಕೃತಿಗಳು ಮತ್ತು ಗ್ರಂಥಾಲಯಗಳ ಒಡನಾಟದಿಂದ ಸಾಧ್ಯ. ಬೌದ್ಧಿಕ ಬದ್ಧತೆ ಜೊತೆಗೆ ಚರಿತ್ರೆ, ಸಮಕಾಲೀನ ಸಮಾಜಗಳ ಆಳವಾದ ಗ್ರಹಿಕೆಗೆ ಪತ್ರಿಕೆ ಮತ್ತು ಕೃತಿಗಳ ಅನುಸಂಧಾನ ಅವಶ್ಯ ಎಂದರು.
ಜಾತಿ, ವರ್ಗ, ವರ್ಣ, ಮತದ ಸೋಂಕಿಲ್ಲದ, ಲಿಂಗ ಭೇಧವಿಲ್ಲದ ಎಲ್ಲರ ಅರಿವಿನ ಜ್ಞಾನದ ವಿಸ್ತಾರದ ಜಾಗವಿದೆ. ಪುಸ್ತಕ ಮನೆ ವೈಚಾರಿಕ-ವೈಜ್ಞಾನಿಕ ಮತ್ತು ಸೈದ್ಧಾಂತಿಕ ಮಂಥನಕ್ಕೆ ವೇದಿಕೆಯಾಗಿದೆ. ಗ್ರಂಥಾಲಯಗಳು ಅರಿವಿನ ಮಂಟಪವಾಗಿದ್ದು ಅಲ್ಲಿ ನಿತ್ಯ ಬಹುಜ್ಞಾನದ ಸಂಕಥನ ನಡೆಯುತ್ತಿರುತ್ತದೆ ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸಿದ್ಧಾರ್ಥ ಭಾವಿಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯ ಮತ್ತು ಗ್ರಂಥಗಳ ಕುರಿತು ಓದುಗರು- ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನ.14ರಿಂದ 20 ರವರೆಗೆ ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಸಂಸ್ಕೃತಿಯಿಂದ ಪುಸ್ತಕ ಸಂಸ್ಕೃತಿಗೆ ಎಲ್ಲರೂ ಬರಬೇಕಿದೆ. ಓದುವ ಹವ್ಯಾಸದಿಂದ ಮನುಷ್ಯನ ವಿಕಾಸ ಸಾಧ್ಯ ಎಂದರು.
ಈ ವೇಳೆ ಲೋಕೇಶ್ ಕನಕ, ಚನ್ನಪ್ಪಾ, ಮಹಾದೇವಪ್ಪ ಮಾನೆ, ಬಸವಕಲ್ಯಾಣ ಮತ್ತು ಹುಲಸೂರು ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು ಇದ್ದರು. ಭವಾನಿ ಕೆ. ನಿರೂಪಿಸಿದರು. ನಿಂಗಪ್ಪ ತುಂಬಗಿ ಸ್ವಾಗತಿಸಿದರು. ರಘು ವಂದಿಸಿದರು.