ಚಾಮರಾಜನಗರ: ಕೋವಿಡ್ 19 ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಏಕಕಾಲದಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರುವ ಸಂದರ್ಭ ತಪ್ಪಿಸಲು ಹಲವು ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಡೀಸಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡೀಸಿ, ಸಾರ್ವಜನಿಕರು ಸರ್ಕಾರದ ವಿವಿಧ ಸೇವೆ ಪಡೆಯುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಮಟ್ಟದ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಇದನ್ನು ತಪ್ಪಿಸಲು ಮುಂದಿನ ಆದೇಶದವರೆಗೆ ವಿವಿಧ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಕಂದಾಯ ಇಲಾಖೆಯ ವಿವಿಧ ಸೇವೆ ಕಲ್ಪಿಸುವ ಅಟಲ್‌ಜೀ, ಸೇವಾ ಸಿಂಧು, ಜನಸ್ನೇಹಿ ಕೇಂದ್ರ, ಸ್ಪಂದನ, ಆಧಾರ್ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ಇತರೆ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳು ಸ್ಥಗಿತಗೊಳಿಸಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡುವ ಚಾಲನಾ ಪರವಾನಗಿ, ಕಲಿಯುವವರ ಪರವಾನಗಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸ್ಥಿರ ಆಸ್ತಿ ನೋಂದಣಿ ಸೇವೆ ಸ್ಥಗಿತವಾಗಲಿವೆ ಎಂದರು.
ತುರ್ತು ಸೇವೆಗೆ ನಿರ್ಬಂಧವಿಲ್ಲ: ತುರ್ತು ಹಾಗೂ ನಿತ್ಯದ ಸೇವೆಗಳಾದ ಬ್ಯಾಂಕ್, ಅಂಚೆ ಕಚೇರಿ, ಕೆಎಸ್‌ಆರ್‌ಟಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತಾ ಕಾರ್ಯಗಳು, ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ, ತುರ್ತು ಸೇವೆಗಳು ನಿರ್ಬಂಧಿತ ಆದೇಶಗಳಿಗೆ ಅನ್ವಯವಾಗುವುದಿಲ್ಲ. ಹಲವು ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿಲ್ಲ. ಎಲ್ಲಾ ಅಧಿಕಾರಿ, ಸಿಬ್ಬಂದಿ ಎಂದಿನಂತೆ ಕಚೇರಿಯಲ್ಲಿ ಲಭ್ಯವಿರಬೇಕು. ಸರ್ಕಾರಿ ಕಚೇರಿಗಳಿಗೆ ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುವುದು ನಮ್ಮ ಉದ್ದೇಶ. ಮೇಲ್ಕಂಡ ಸೇವೆಗಳಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ. ಆದೇಶ ಪಾಲಿಸದೇ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.