Advertisement

ಲೈಬ್ರರಿ ಸೈನ್ಸ್‌ ಅವಕಾಶಗಳ ಅಗರ

07:53 PM Oct 22, 2019 | mahesh |

ಲೈಬ್ರರಿ ಕೇವಲ ಗ್ರಂಥ ಸಂಗ್ರಹಾಲಯದ ಕೋಣೆಯಲ್ಲ. ಅದೊಂದು ಜ್ಞಾನದ ಆಗರಗಳನ್ನು ಹೊತ್ತ ದೇವಾಲಯ. ಮಾಹಿತಿ ಕೊಡುವ, ಮಾಹಿತಿ ಹೊತ್ತ ಗ್ರಂಥಗಳನ್ನು ಸೂಕ್ತವಾಗಿ ಒದಗಿಸಿಕೊಡುವ ಮತ್ತು ಮಾಹಿತಿ ತಾಣಗಳ ಬಗ್ಗೆ ಖುದ್ದು ಮಾಹಿತಿ ಹೊಂದಿದ ವೃತ್ತಿಪರರೂ ಪ್ರತಿ ಗ್ರಂಥಾಲಯದ ಜ್ಞಾನ ಪ್ರಸರಣೆಯ ಕೊಂಡಿಗಳಾಗಿರುತ್ತಾರೆ. ಅದಕ್ಕಾಗಿ ಗ್ರಂಥಾಲಯ ನಿರ್ವಹಣೆಯೂ ಒಂದು ಕಲೆಯಾಗಿದೆ ಎಂಬುದು ಸರ್ವ ವಿಧಿತ.

Advertisement

ಗ್ರಂಥಾಲಯವೆಂದರೆ ಕೇವಲ ಪುಸ್ತಕ ಹೊತ್ತ ಕಪಾಟುಗಳಲ್ಲ. ಅದೊಂದು ಮಾಹಿತಿ ವಿನಿಮಯದ ತಾಣವಿದ್ದಂತೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದಷ್ಟು ದೇಶದ ಭವಿಷ್ಯ ಸುಭದ್ರವಾಗುತ್ತದೆ. ಮನಸ್ಸುಗಳಲ್ಲಿ ಓದಿನ ಹರಿವು ಹೆಚ್ಚಿ, ಜ್ಞಾನವರ್ಧನೆಯೊಂದಿಗೆ ದೇಶದ ವಿಕಾಸವೂ ಆಗುತ್ತದೆ. ಅದಕ್ಕಾಗಿಯೇ ಗ್ರಂಥಾಲಯಗಳನ್ನು ಜ್ಞಾನ ದೇವರ ಕೋಣೆ ಎನ್ನುತ್ತಾರೆ.

ಗ್ರಂಥಾಲಯಗಳ ನಿರ್ವಹಣೆಯೂ ಒಂದು ಕಲೆ. ಶಿಕ್ಷಣದ ಚೌಕಟ್ಟಿನಲ್ಲಿ ಅಧ್ಯಯನಿಸಿದರೆ ಮಾತ್ರ ಗ್ರಂಥಾಲಯಗಳನ್ನು ಸುಸೂತ್ರವಾಗಿ ನಿರ್ವಹಿಸಬಹುದು. ಅದಕ್ಕಾಗಿಯೇ ಗ್ರಂಥಾಲಯಗಳ ನಿರ್ವಹಣೆಗಾಗಿಯೇ ತರಬೇತಿಗಳಿವೆ. ಅದೆಂದರೆ ಲೈಬ್ರರಿ ಸೈನ್ಸ್‌.

ವೃತ್ತಿಪರ ಶಿಕ್ಷಣ
ಗ್ರಂಥಪಾಲಕರಾಗಬೇಕಾದರೆ ಸುಲಭದ ಕೆಲಸವಲ್ಲ. ಪಿಯುಸಿ ಬಳಿಕ ಇದನ್ನೂ ವೃತ್ತಿಪರ ಶಿಕ್ಷಣವನ್ನಾಗಿ ಅಧ್ಯಯನ ಮಾಡಬೇಕಾಗುತ್ತದೆ. ಪಿಯುಸಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಯಾವುದೇ ವಿಭಾಗದಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾದವರು ಈ ಕೋರ್ಸ್‌ನ್ನು ಆಯ್ಕೆ ಮಾಡಿಕೊಳ್ಳಬಹುದು.

ಗ್ರಂಥಾಲಯ ವಿಜ್ಞಾನದಲ್ಲಿ ಗ್ರಂಥಾಲಯ ಆಡಳಿತ ಮತ್ತು ನಿರ್ವಹಣೆ, ವರ್ಗೀಕರಣ, ಸೂಚೀಕರಣ, ಗ್ರಂಥಾಲಯದ ಇತರ ಕೆಲಸ ಕಾರ್ಯ, ಕಂಪ್ಯೂಟರ್‌ ಕೇಂದ್ರಿತ ಕೆಲಸಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮಾಧ್ಯಮದಿಂದ ಪುಸ್ತಕ ಓದುವಿಕೆ ಮೂಲಕ ಜ್ಞಾನ ವಿಸ್ತಾರಣೆಯ ಯುಗ ಕಳೆದು ಹೋಗಿದ್ದರೂ, ಗ್ರಂಥಾಲಯಗಳಲ್ಲಿ ಓದುವವರು ಮತ್ತು ಗ್ರಂಥಾಲಯಗಳಿಂದ ಪುಸ್ತಕ ಪಡೆದುಕೊಳ್ಳುವವರ ಸಂಖ್ಯೆ ಕುಸಿದಿಲ್ಲ. ಹಾಗಾಗಿ ಗ್ರಂಥಪಾಲಕರಿಗೆ ಬೇಡಿಕೆಯೂ ಕುಸಿದಿಲ್ಲ ಎಂಬುದು ಖುಷಿ ವಿಷಯವೇ.

Advertisement

ವಿಸ್ತಾರ ಅವಕಾಶ
ಗ್ರಂಥಾಲಯ ವಿಜ್ಞಾನ ಕಲಿತವರಿಗೆ ಉದ್ಯೋಗಾವಕಾಶದ ವ್ಯಾಪ್ತಿ ವಿಸ್ತಾರವಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಂದೊಂದು ಗ್ರಂಥಾಲಯ ಇರುತ್ತದೆ. ದೊಡ್ಡ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಎರಡರಿಂದ ಮೂರು ಮಂದಿ ಗ್ರಂಥಪಾಲಕರು ಅಗತ್ಯ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ಗ್ರಂಥ ಪಾಲಕರಿಗೆ ತೆರೆದಿರುತ್ತದೆ. ಸಾರ್ವಜನಿಕ ಉದ್ದಿಮೆಗಳು, ಸರಕಾರಿ, ಅರೆ ಸರಕಾರಿ ಸಂಸ್ಥೆಗಳು, ತಾಂತ್ರಿಕ ಮಾಹಿತಿ ಕೇಂದ್ರಗಳಲ್ಲಿ ಗ್ರಂಥಾಲಯ ಸಹಾಯಕರಾಗಿ, ಗ್ರಂಥಪಾಲಕರಾಗಿ, ಸಹ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಬಹುದು.

ಕಲಿಕೆಯೂ ಭಿನ್ನ
ಗ್ರಂಥಾಲಯ ವಿಜ್ಞಾನ ಕಲಿಕೆ ಇತರ ಕಲಿಕೆಗಳಿಂತ ತುಸು ಭಿನ್ನ. ಇಲ್ಲಿ ವಿವಿಧ ಭಾಷಾ ಸಾಹಿತ್ಯ ಕಲಿಕೆಯಂತೆಯೇ ಸಾಹಿತ್ಯದ ಒಳಹೊರಗುಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಕನ್ನಡ, ಇಂಗ್ಲಿಷ್‌, ಹಿಂದಿ ಸಾಹಿತ್ಯದ ವಿಸ್ತೃತ ಅಧ್ಯಯನ ಅಗತ್ಯ. ಅದರಲ್ಲೂ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ತುಸು ಹೆಚ್ಚೇ ಜ್ಞಾನ ಇದ್ದರೊಳ್ಳೆಯದು. ಗ್ರಂಥಾಲಯ ವಿಜ್ಞಾನ ಕಲಿಯುತ್ತಲೇ ಪುಸ್ತಕ ಪ್ರೇಮ ಬೆಳೆಸಿಕೊಳ್ಳಲು, ಓದುವಿಕೆಯ ಮೂಲಕ ಜ್ಞಾನ ವರ್ಧನೆ ಮಾಡಿಕೊಳ್ಳಲು ಹಲವಾರು ಅವಕಾಶಗಳಿರುತ್ತವೆ. ನೆಚ್ಚಿದ ಉದ್ಯೋಗವನ್ನು ಪ್ರೀತಿಯಿಂದಲೇ ನಿರ್ವಹಿಸಿದ್ದಲ್ಲಿ ಉತ್ತಮ ಗ್ರಂಥಪಾಲಕರಾಗಿ ಗುರುತಿಸಿಕೊಳ್ಳಲು ಈ ಕ್ಷೇತ್ರದಲ್ಲಿ ಅವಕಾಶಗಳಿವೆ.

ಕಲಿಕಾ ಹಂತ
ಯಾವುದೇ ವಿಷಯದಲ್ಲಿ ಪಿಯಸಿ ಪಡೆದವರು ಮೂರು ವರ್ಷದ ಲೈಬ್ರರಿ ಸೈನ್ಸ್‌ ಪದವಿ ಕೋರ್ಸ್‌ ಮಾಡಬಹುದು. ಪದವೀಧ ರರಿಗೆ ಎರಡು ವರ್ಷ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಕೋರ್ಸ್‌ ಇರುತ್ತದೆ. ಲೈಬ್ರರಿ ಸೈನ್ಸ್‌ನಲ್ಲಿ ಡಿಪ್ಲೊಮಾ ಕೋರ್ಸ್‌ಗಳೂ ಇವೆ. ಡಿಪ್ಲೊಮಾ ಇನ್‌ ಲೈಬ್ರರಿ ಸೈನ್ಸ್‌, ಬಿಲಿಬ್‌, ಎಂ.ಲಿಬ್‌, ಎಂ.ಫಿಲ್‌. ವಿಷಯದಲ್ಲಿ ಕೋರ್ಸ್‌ಗಳು ದೊರೆಯುತ್ತವೆ. ಬಿಎಲ್‌ಐಎಸ್‌ಸಿ, ಎಂಎಲ್‌ಐಎಸ್‌ಸಿ, ಎಂಫಿಲ್‌, ಪಿಎಚ್‌ಡಿ ಅಧ್ಯಯನಕ್ಕೂ ಈ ಕ್ಷೇತ್ರ ಪೂರಕ ತಾಣ ಒದಗಿಸಿಕೊಡುತ್ತದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೋರ್ಸ್‌ ಲಭ್ಯವಿದೆ.

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next