ದೋಟಿಹಾಳ: ಸಮೀಪದ ಗೋತಗಿ ಗ್ರಾಮದ ರಸ್ತೆ ಹಲವು ವರ್ಷಗಳು ಕಳೆದರೂ ದುರಸ್ತಿಯಾಗದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರತಿ ದಿನ ಸಂಚರಿಸುವಾಗ ನರಕಯಾತನೆ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತು ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗೊತ್ತಗಿ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಹೆದ್ದಾರಿಯಿಂದ ಸುಮಾರು 5 ಕಿ.ಮೀ. ದೂರದ ತೋನಸಿಹಾಳ, ಗೋತಗಿ ಗ್ರಾಮಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದು ಸಂಚಾರಕ್ಕೆ ಅಪಾಯಕಾರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಸ್ತೆ ದುರಸ್ತಿಯ ಭರವಸೆ ನೀಡಿದ್ದರು.
ಆದರೆ ಇದುವರೆಗೂ ರಸ್ತೆ ದುರಸ್ತಿಯಾಗಿಲ್ಲ. ಕಕ್ಕಿಹಾಳ ಕ್ರಾಸ್‌ಯಿಂದ ಗೋತಗಿ ಗ್ರಾಮಕ್ಕೆ ಹೋಗಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ಸಾಗುವಂತ್ತಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಹಿಡಿ ಶಾಪ ಹಾಕಿ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ವರ್ಷದ ಹಿಂದೆ ಗರ್ಭಿಣಿ ಹೆಚ್ಚಿನ ಚಿಕಿತ್ಸೆಗಾಗಿ ಹೋಗುವಾಗ ದಾರಿಯ ಮಧ್ಯೆದಲ್ಲಿ ಮೃತಪಟ್ಟಿದ್ದಾಳೆ.
ಗ್ರಾಮದ ಸರಕಾರಿ ಶಾಲೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದ ಶಿಕ್ಷಕನ ಬೆನ್ನುಮೂಳೆ ಮುರಿದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ರೀತಿ ಗ್ರಾಮದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗೋತಗಿ ಗ್ರಾಮಸ್ಥರು ಹೇಳಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೂಖ ಪ್ರೇಕ್ಷಕರಾಗಿದ್ದಾರೆ. ಇದರಿಂದ ಬೇಸತ್ತು ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ತಹಶೀಲ್ದಾರ್‌ರಿಗೆ ಮನವಿಯಲ್ಲಿ ತಿಳಿಸಿದ್ದಾರೆ.
ಗೋತಗಿ ಗ್ರಾಮಸ್ಥರು ಸೋಮವಾರ ಲೋಕಸಭಾ ಚುನವಾಣೆ ಬಹಿಷ್ಕಾರ ಮಾಡುವ ಬಗ್ಗೆ ಮನವಿ ಪತ್ರ ನೀಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಚುನವಾಣೆ ಬಹಿಷ್ಕಾರ ಮಾಡಬೇಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡುತ್ತೇವೆ. ಚುನಾವಣೆ ಯಶಸ್ವಿಯಾಗಿ ನಡೆಯಲು ಸೂಕ್ತ ಕ್ರಮ ಕೈಗೋಳ್ಳುತ್ತೇವೆ.
ಕೆ.ಎಂ. ಗುರುಬಸವರಾಜ್, ತಹಶೀಲ್ದಾರ್