ಕಿನ್ನಿಗೋಳಿ: ಸಮಾಜ ಸೇವಕರು ಹಾಗೂ ಮೂಲ್ಕಿ ಪೊಲೀಸರ ಶ್ರಮದಿಂದ 9ನೇ ತರಗತಿಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ ಮನೆಯಲ್ಲೇ ಉಳಿದುಕೊಂಡಿದ್ದ ಬಾಲಕ ನೋರ್ವನಿಗೆ ಶಿಕ್ಷಣ ಮುಂದುವರಿಸುವ ಅವಕಾಶ ಸಿಕ್ಕಿದೆ.
ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಮಸಕಟ್ಟೆಯಲ್ಲಿ ಗಂಡನಿಂದ ಪರಿತ್ಯಕ್ತಳಾಗಿದ್ದ ಮಹಿಳೆಯೊಬ್ಬರು ಏಕೈಕ ಪುತ್ರ
ನೊಂದಿಗೆ ವಾಸವಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆರ್ಥಿಕ ಸಮಸ್ಯೆ ಕಾರಣ ದಿಂದ ಪುತ್ರನ ಶಿಕ್ಷಣವನ್ನು 9ನೇ ತರಗತಿಯಲ್ಲಿ ಮೊಟಕುಗೊಳಿ ಸಿದ್ದರು. ಈ ಬಾಲಕನನ್ನು ಮನೆಯಲ್ಲೇ ಇರಿಸಿಕೊಂಡು ಆತನ ಶಿಕ್ಷಣದ ಹಕ್ಕಿನಿಂದ ವಂಚಿತಗೊಳಿಸಲಾಗಿತ್ತು.
ಈ ಬಗ್ಗೆ ಸಮಾಜಸೇವಕ, ಆರ್‌ಟಿಐ ಕಾರ್ಯಕರ್ತ ಸ್ಟಾನಿ ಅವರು ಮಕ್ಕಳ ಸಹಾಯವಾಣಿ ಹಾಗೂ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿ, ಬಾಲಕ ನನ್ನು ಶಾಲೆಗೆ ಕಳುಹಿಸಲು ತಾಯಿಯ ಮನವೊಲಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಮೂಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಲಕನ ಮನೆಗೆ ತೆರಳಿ ಆತನ ತಾಯಿಯ ಜತೆ ಮಾತನಾಡಿದರು. ಮಗನ ಶಿಕ್ಷಣದ ಹಕ್ಕಿನ ಬಗ್ಗೆ ವಿವರಿಸಿದರಲ್ಲದೆ, ಅಗತ್ಯ ಸಹಾಯದ ಭರವಸೆಯನ್ನೂ ನೀಡಿ ದರು. ಪೊಲೀಸರ ಸಲಹೆಗೆ ಬಾಲಕನ ತಾಯಿಯೂ ಒಪ್ಪಿಕೊಂಡು ಮಗನನ್ನು ಶಾಲೆಗೆ ಕಳುಹಿಸಲು ಮುಂದಾದರು. ಬಾಲಕನ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಮುಂತಾದವುಗಳ ಖರ್ಚನ್ನೂ ನೀಡಿ, ಆತನನ್ನು ಕಿನ್ನಿಗೋಳಿಯ ಶಾಲೆಗೆ ಸೇರಿಸಲು ನಿರ್ಧರಿಸಲಾಯಿತು.
ಈ ಕಾರ್ಯಕ್ಕೆ ಮೂಲ್ಕಿ ಠಾಣೆಯ ಅಧಿಕಾರಿಗಳು, ಎಎಸ್‌ಐ ಸಂಜೀವ್ ಪಿ., ಮಹಿಳಾ ಹೆಡ್ ಕಾನ್‌ಸ್ಟೆಬಲ್ ಜಾಯ್ಸ ಸುಚಿತ ಡಿ’ ಸೋಜಾ, ಹೆಡ್ ಕಾನ್‌ಸ್ಟೆಬಲ್‌ಗಳಾದ ಪವನ್ ಕುಮಾರ್, ಸತೀಶ್, ಚಂದ್ರಶೇಖರ್, ಹರಿಪ್ರಸಾದ್ ಮುಂತಾದವರು ಕೈಜೋಡಿಸಿದ್ದಾರೆ.