ಬೆಳ್ತಂಗಡಿ: ಈ ವಿದ್ಯಾರ್ಥಿಗೆ ದೃಷ್ಟಿದೋಷ. ಶಾಲೆಯಲ್ಲಿ ಅಧ್ಯಾಪಕರು ಪಾಠ ಮಾಡುತ್ತಿದ್ದರೆ ಈತ ಮೊಬೈಲ್ ಹಿಡಿದಿರುತ್ತಿದ್ದ.
ಮೊಬೈಲ್ ಆಟವಾಡುತ್ತಾನೆಂದು ಭಾವಿಸಿದರೆ ಆತ ಮೊಬೈಲ್‌ನಲ್ಲಿ ಗೇಮ್ಸ್ ನೋಡುತ್ತಿರಲಿಲ್ಲ, ಆಡುತ್ತಿರಲಿಲ್ಲ. ಬದಲಾಗಿ, ಅಧ್ಯಾಪಕರು ಹೇಳುತ್ತಿದ್ದ ಪಾಠವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ!. ಹೀಗೆ ಪಾಠಗಳನ್ನು ಅಭ್ಯಾಸ ಮಾಡಿದ ಆ ಹುಡುಗ ಎಸೆಸೆಲ್ಸಿ ಪರೀಕ್ಷೆಯನ್ನು ಸಹೋದರಿಯ ಸಹಾಯದಿಂದ ಬರೆದ. ಮೊನ್ನೆ ಫಲಿತಾಂಶ ಬಂದಾಗ 551 ಅಂಕ ಗಳಿಸಿದ್ದ!. ಈ ರೀತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು ತನ್ನ ದೈಹಿಕ ದೌರ್ಬಲ್ಯವನ್ನು ಮೆಟ್ಟಿನಿಂತು ಗಟ್ಟಿಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿ ಉನ್ನತ ಶ್ರೇಣಿಯಲ್ಲಿ ಪಾಸಾದ ಹುಡುಗನೇ ನೆರಿಯ ಗಂಡಿಬಾಗಿಲಿನ ಜಾರ್ಜ್ ಮತ್ತು ಆನ್ಸಿ ಅವರ ಪುತ್ರ ಸಿರಿಲ್ ಎನ್.ಜಿ.
ಸಿರಿಲ್ ಈ ಬಾರಿಯ ಎಸೆಸೆಲ್ಸಿಯಲ್ಲಿ ಶೇ.88.16ರಷ್ಟು ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆಯನ್ನು ಮೆರೆದಿದ್ದಾನೆ. ಜಾರ್ಜ್ ದಂಪತಿಗೆ ಇಬ್ಬರು ಪುತ್ರಿಯರು, ಹಾಗೂ ಓರ್ವ ಪುತ್ರ, ಆತನೇ ಸಿರಿಲ್. ಇವರದ್ದು ಕೃಷಿಕ ಕುಟುಂಬವಾಗಿದ್ದು ಸಿರಿಲ್‌ನ ವಿದ್ಯಾಭ್ಯಾಸದ ಸಲುವಾಗಿಯೇ ಲಾೖಲಕ್ಕೆ ಬಂದು ನೆಲೆಸಿದರು. ಸಿರಿಲ್ ಹುಟ್ಟಿನಿಂದಲೇ ಮಂದದೃಷ್ಟಿ ಹೊಂದಿದ್ದು ಶಾಲೆಯಲ್ಲಿ ಕಲಿಕೆಯ ಕಡೆಗೆ ಅಪಾರ ಆಸಕ್ತಿ ಹೊಂದಿದ್ದ. ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ 5ನೇ ತರಗತಿಗೆ ಸೇರಿ 10ನೇ ತರಗತಿಯವರೆಗೆ ಸಾಮಾನ್ಯ ಮಕ್ಕಳೊಂದಿಗೆ ಕಲಿತು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆಗೈದಿದ್ದ. ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ.
ಸಿರಿಲ್‌ಗೆ ದೃಷ್ಟಿ ಸಮಸ್ಯೆ ಇದ್ದುದರಿಂದ ಶಾಲೆಯಲ್ಲಿ ಅಧ್ಯಾಪಕರು ಬೋರ್ಡಿನಲ್ಲಿ ಬರೆದದ್ದು ಕಾಣಿಸುತ್ತಿರಲಿಲ್ಲ ಮಾತ್ರವಲ್ಲ ಪಾಠಗಳನ್ನು ಪುಸ್ತಕದಲ್ಲಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಕರು ಹೇಳಿದ್ದೂ ಪಕ್ಕನೆ ತಲೆಗೆ ಹೊಳೆಯುತ್ತಿರಲಿಲ್ಲ.
ಹಾಗಿದ್ದರೂ, ತರಗತಿಯಲ್ಲಿ ಅಧ್ಯಾಪಕರು ಕಲಿಸುವ ಪಾಠವನ್ನು ಏಕಾಗ್ರತೆಯಿಂದ ಕೇಳಿ ಮೊಬೈಲ್ ಮೂಲಕ ರೆಕಾರ್ಡ್ ಮಾಡಿ ಮನೆಗೆ ಹೋಗಿ ಮತ್ತೆ ಕೇಳುತ್ತಿದ್ದ. ಅಂಧ ವಿದ್ಯಾರ್ಥಿಗಳಿಗೆ ಎರಡು ವಿಷಯಗಳಲ್ಲಿ ರಿಯಾಯಿತಿ ಇದೆ. ಆದರೆ ಗಣಿತದಲ್ಲಿ ಆಸಕ್ತನಾದ ಸಿರಿಲ್ ಯಾವುದೇ ವಿಷಯವನ್ನು ಕಲಿಯದೇ ಇರುವುದು ಬೇಡ ಎಂದು ಗಣಿತವನ್ನೂ ಆರಿಸಿಕೊಂಡ. ಅನುಮಾನ ಬಂದುದನ್ನು ಶಿಕ್ಷಕರ ಬಳಿ, ಮನೆಯಲ್ಲಿ ಅಕ್ಕನ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದ. ಹೀಗೆ ಗಮನವಿಟ್ಟು ಅಭ್ಯಾಸವನ್ನು ಮಾಡಿದ್ದ ಸಿರಿಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯನ್ನು ತನ್ನ ಅಕ್ಕನ ಸಹಾಯದಿಂದ ಬರೆದ. ಮೊನ್ನೆ ಫಲಿತಾಂಶ ಬಂದಾಗ ಸಿರಿಲ್‌ಗೆ 551 ಅಂಕಗಳು ಎ ಶ್ರೇಣಿಯೂ ಬಂದಿತ್ತು.
ಈಗ ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡು ಬಿಕಾಂ ಮಾಡುವ ಕನಸು ಹೊಂದಿದ್ದಾನೆ. ಶಾಲಾ ಶಿಕ್ಷಕರ ಹಾಗೂ ಮನೆಯವರ ಪ್ರೋತ್ಸಾಹವನ್ನು ಬಳಕೆಮಾಡಿ ಸಾಧಿಸಬೇಕೆಂಬ ಹಠ ಹಾಗೂ ಸಾಧನೆಯಿಂದ ಇದು ಸಾಧ್ಯವಾಯಿತು ಎನ್ನುತ್ತಾರೆ ಸಿರಿಲ್‌ನ ಸೈಂಟ್ ಮೆರೀಸ್ ಶಾಲಾ ಮುಖ್ಯ ಶಿಕ್ಷಕಿ ಸಿ| ಜಿನ್ಸಿ ದೇವಸ್ಯ.