ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ಹದಿಹರೆಯದ ಮನ ಗಳಿಗೆ ಮುದ ನೀಡುವ ದಿನಗಳವು. ವಯೋಸಹಜ ಭಾವನೆಗಳು, ಆಸೆ-ಆಕಾಂಕ್ಷೆಗಳು ಮತ್ತೂ ಕೆಲವರಿಗೆ ಮಹಾತ್ವಾಕಾಂಕ್ಷೆಗಳು ಚಿಗುರುವ ಕಾಲ. ಅಂದಿನ ದಿನಗಳಲ್ಲಿ ಬಸ್ಸೊಂದು ರಥವಿದ್ದಂತೆ; ಅದೊಂದು ಹರೆಯದ ಮನಸ್ಸುಗಳ ಭಾವಸೇತು. ಚಾಲಕರೆಂದರೆ ನಮ್ಮ ಪಾಲಿನ ಹೀರೋಗಳು. ಅದರಲ್ಲೂ ಯುವ ಚಾಲಕರು ಕನ್ನಡಿಯಲ್ಲಿ ನೋಡಿ ಮುಗುಳ್ನಕ್ಕರೆ ನಮಗೊಂದು ಹೆಮ್ಮೆ.
ಹೀಗಿದ್ದಾಗ ಒಂದು ದಿನ ಬಸ್ಸಿನಲ್ಲಿ ಇಬ್ಬರು ಕೂರುವ ಸೀಟಿನ ಕಿಟಕಿ ಬದಿಯಲ್ಲಿ ಕುಳಿತಿದ್ದೆ. ತಕ್ಷಣ ಉದ್ದೇಶಪೂರ್ವಕವಾಗಿ ತರುಣನೊಬ್ಬ ನನ್ನ ಬಳಿ ಬಂದು ಕುಳಿತ ನನ್ನನ್ನು ನೋಡಿ ನಗು ಸೂಸಿದ. ನಾನೂ ಮುಗುಳ್ನಕ್ಕು ಸುಮ್ಮನಾದೆ. ಗೌರವರ್ಣದ ಚಿಗುರು ಮೀಸೆಯ ಹುಡುಗ. ಹೊಳೆವ ಕಂಗಳು, ಎತ್ತರದ ನಿಲುವು, ಮಂದಹಾಸದ ಮುಖ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ…, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದ. ಕೂದಲು ಕ್ರಾಪ್ ಮಾಡಿದ್ದ.ಸ್ನೇಹಜೀವಿಯಂತೆ ಕಾಣುತ್ತಿದ್ದ. ನನ್ನ ಕೈಲಿದ್ದ ಪುಸ್ತಕ ನೋಡಿ, “”ಏನ್ ಓದ್ತಾ ಇದ್ದೀರಾ?” ಎಂದು ಕೇಳಿದ. “”ಏನಿಲ್ಲ, ಒಂದು ಗಂಟೆ ಸುಮ್ನೆ ಕೂರಬೇಕಲ್ಲ, ಅದಕ್ಕೆ ಪುಸ್ತಕ ಓದ್ತಾ ಇದ್ದೇನೆ” ಎಂದೆ. ಆ ದಿನ ಆತನಿಗೆ ವಿದಾಯ ಹೇಳಿ ಬಸ್ಸಿಳಿದೆ.
ಮರುದಿನವೂ ಆತ ಅದೇ ಸೀಟಿನಲ್ಲಿ ನನಗಾಗಿ ಕಾಯುತ್ತಿದ್ದ. ನಿರಾಶೆ ಮಾಡುವುದು ಬೇಡ ಎಂದು ಅಲ್ಲೇ ಕುಳಿತೆ. “”ಗುಡ್ ಮಾರ್ನಿಂಗ್, ಹೇಗಿದ್ದೀರಾ, ಏನು ಮತ್ತೆ ವಿಶೇಷ?” ಎಂದ. “”ಒಳ್ಳೆಯದು” ಹೇಳಿದೆ. “”ನಿನ್ನೆ ನಿಮ್ಮತ್ರ ಮಾತಾಡಿ ಖುಷಿಯಾಯಿತು. ನಾನೂ ತುಂಬ ದಿನ ದಿಂದ ಮಾತಾಡಿಸ್ಬೇಕು ಅಂತ ಅನ್ಕೊಂಡಿದ್ದೆ. ನಿನ್ನೆ ನೀವು ಬೈಯಲಿಲ್ಲ ಅಲ್ವ, ಅದಕ್ಕೆ ಇವತ್ತು ಧೈರ್ಯ ಬಂತು. ನಾನು ನಿಮ್ಮ ಪಕ್ಕದ ಊರಿನವನೇ. ಕಾಲೇಜಿಗೆ ಹೋಗ್ತೀನೆ” ಎಂದ.
ನಾನು ಓದಲು ಪುಸ್ತಕ ತೆಗೆದೆ ತಕ್ಷಣ ಬೇಸರದಿಂದ, “”ಏನ್ರೀ ಒಂದು ವಾರದಿಂದ ನೋಡ್ತಾ ಇದ್ದೇನೆ. ಯಾವಾಗ್ಲೂ ಓದ್ತಾ ಇರ್ತೀರಾ” ಎಂದ. ನನ್ನ ಪುಸ್ತಕ ತುಂಬಿದ ಬ್ಯಾಗ್ ನೋಡಿ, “”ನೀವು ತುಂಬಾ ಸಿನ್ಸಿಯರ್ ಸ್ಟೂಡೆಂಟಾ? ಯಾವಾಗ್ಲೂ ಓದ್ತಾ ಇರ್ತೀರಾ, ಯಾರ ಹತ್ರನೂ ಮಾತಾಡಲ್ಲ ಯಾಕೆ? ನಾವು ನೋಡಿ ನಾಲ್ಕು ಪುಸ್ತಕದಲ್ಲಿ ಇಡೀ ವರ್ಷ ಮುಗಿಸ್ತೀವಿ. ಯಾವಾಗ್ಲೂ ಇಷ್ಟು ಸೀರಿಯಸ್ಸಾಗಿ ಇರಬೇಡಿ. ಕಿಟಕಿಯಿಂದಾಚೆಗೂ ಸ್ವಲ್ಪ ನೋಡಿ. ಜನ, ಊರು-ಕೇರಿ ಎಲ್ಲ ತಿಳೀರಿ, ಲೈಫ್ ಎಂಜಾಯ್ ಮಾಡಿ, ಖುಷಿಯಾಗಿರಿ. ಸಮಯ ಇದ್ದಾಗ ನನ್ನ ಬಗ್ಗೆ ಕೂಡ ಸ್ವಲ್ಪ ಯೋಚಿಸಿ” ಎಂದು ಕಣ್ಣು ಮಿಟುಕಿಸಿ ನಗೆ ಸೂಸಿದ್ದ. ಆತನ ಮಾತುಗಳಿಗೆ ನಾನೂ ಮನಸಾರೆ ನಗೆ ಬೀರಿದ್ದೆ.
ಆನಂತರ ಕಾರಣಾಂತರಗಳಿಂದ ಬೇಗ ಹೋಗಬೇಕಾದಾಗ ಬಸ್ಸು ಬದಲಿಸಬೇಕಾಯಿತು. ನಾನು ಪದವಿ ಮುಗಿಸಿ ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕೊಂದು ನನ್ನ ಬಳಿ ನಿಂತಿತು. ಹೆಲ್ಮೆಟ್ ತೆಗೆಯುತ್ತ ನನ್ನ ಬಳಿ ಬಂದ ಅದೇ ನಾಲ್ಕು ವರ್ಷದ ಹಿಂದೆ ಬಸ್ಸಿನಲ್ಲಿ ಸಿಕ್ಕ ಯುವಕ. ಇನ್ನೂ ಎತ್ತರವಾಗಿದ್ದ . ತತ್‌ಕ್ಷಣ ಕಥೆಗಳಲ್ಲಿ ಕುದುರೆ ಏರಿ ಬರುವ ರಾಜಕುಮಾರನ ನೆನಪಾಯಿತು. “”ಏನ್ರೀ, ನನ್ನ ಕಾಟ ಬೇಡಾಂತ ಬಸ್ಸೇ ಬದಲಾಯಿಸಿದ್ರಾ? ಮತ್ತೆ ನೀವು ನೋಡ್ಲಿಕ್ಕೇ ಇಲ್ಲ” ಪ್ರಶ್ನಿಸಿದ. ಆತನ ಪ್ರಶ್ನೆಗಳಿಗೆ ಸಮಜಾಯಿಷಿಯ ಉತ್ತರ ನೀಡಿದ್ದೆ. “”ಖುಷಿಯಾಯ್ತುರೀ, ನಿಮ್ಮತ್ರ ಮಾತಾಡಿ ಸೀರೆಯಲ್ಲಿ ತುಂಬಾ ಚಂದ ಕಾಣ್ತಿರ. ಆಲ್ ದಿ ಬೆಸ್ಟ್. ಹ್ಯಾಪಿಯಾಗಿರಿ” ಎಂದು ಮಳೆಯಂಥ ಹುಡುಗ ಮರೆಯಾಗಿದ್ದ. ನಾನೂ ಕೂಡ ಆತ್ಮೀಯತೆಯಿಂದ ವಿದಾಯ ಹೇಳಿದ್ದೆ.
ಬಸ್ಸಿನಲ್ಲಿ ಆ ಎರಡು ದಿನಗಳ ಸಾಮೀಪ್ಯ, ಮತ್ತೂಂದು ಸಣ್ಣ ಭೇಟಿ ಇಂದಿಗೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.
ವಿದ್ಯಾಲಕ್ಷ್ಮೀ ಎಸ್. ಭಟ್ ಕಾರ್ಕಳ
ಅಂತಿಮ ಬಿ. ಎ.
ದೂರಶಿಕ್ಷಣ ವಿದ್ಯಾರ್ಥಿನಿ, ಕುವೆಂಪು ವಿಶ್ವವಿದ್ಯಾಲಯ