ಬಸವರಾಜ್ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಸಂತ ಶಿಶುನಾಳ ಶರೀಫರ, ಶಿಶುನಾಳ ಗ್ರಾಮದವರು. ಓದಿದ್ದು ಕೇವಲ ಆರನೇ ತರಗತಿ. ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎನ್ನುವ ಹಂಬಲದೊಂದಿಗೆ ಸಿನಿಮಾ ಲೋಕಕ್ಕೆ ಧುಮುಕಿದ ಬಸವರಾಜ್‌ಗೆ, ಅಲ್ಲಿ ಕೈಹಿಡಿದಿದ್ದು ಮೇಕಪ್‌ನ ಬ್ರಶ್ಶ್ಗಳು!
ಸಿನಿಮಾವೋ, ಕಿರುತೆರೆಯೋ… ಅದು ಆರಂಭಗೊಳ್ಳುವಾಗ, ಇಲ್ಲವೇ ಮುಗಿಯುವಾಗ ಟೈಟಲ್ ಕಾರ್ಡಿನಲ್ಲಿ “ಪ್ರಸಾಧನ’ ಎನ್ನುವ ಪದವೊಂದು ಹಾದುಹೋಗುತ್ತದೆ. ಕ್ಷಣಮಾತ್ರದಲ್ಲಿ ಮರೆಯಾಗುವ ಆ ಪದ ಮತ್ತು ಅದರ ಕೆಳಗಿನ ಹೆಸರಿನ ಮೇಲೆ ಗಮನ ಹರಿಸುವವರು ಕಡಿಮೆ. ಅದೇ ಪರದೆಯ ಮೇಲೆ ನಾಯಕ ಬಂದಾಗ, ನಾಯಕಿ ನಕ್ಕಾಗ, “ಆಹಾ! ಎಷ್ಟು ಮುದ್ದು ಮುದ್ದಾಗಿದ್ದಾರೆ’ ಎಂದು ಅವರ ಸೌಂದರ್ಯವನ್ನು ಹೊಗಳಿ, ಹರ್ಷಿಸುತ್ತೇವೆ.
ತೆರೆಮೇಲಿನ ಈ ಮುಖಗಳನ್ನು ಚೆಂದ ಮಾಡುವ ಸಾಹಸವೇ “ಪ್ರಸಾಧನ’ ಹುಡುಗರದ್ದು. ಅಂದರೆ, ಮೇಕಪ್ ಆರ್ಟಿಸ್ಟ್‌ಗಳದ್ದು. ಯಾವುದೇ ಪಾತ್ರಗಳನ್ನು, ನೋಡುಗನ ಕಣ್ಣಲ್ಲಿ ಚಿರಾಯು ಮಾಡುವ ಕೆಲಸವನ್ನು ಈ ಕಲಾವಿದರು ಮಾಡುತ್ತಾರೆ. ಪ್ರಸಾಧನ ಕಲೆಯನ್ನು ಕರಗತ ಮಾಡಿಕೊಂಡು, ಬೆಂಗಳೂರಿನಲ್ಲಿ ಮೇಕಪ್‌ಮ್ಯಾನ್ ಆಗಿ ಬದುಕು ಕಂಡುಕೊಂಡವರು, ಬಸವರಾಜ್ ಹುಬ್ಬಳ್ಳಿ.
ಬಸವರಾಜ್ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಸಂತ ಶಿಶುನಾಳ ಶರೀಫರ, ಶಿಶುನಾಳ ಗ್ರಾಮದವರು. ಓದಿದ್ದು ಕೇವಲ ಆರನೇ ತರಗತಿ. ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎನ್ನುವ ಹಂಬಲದೊಂದಿಗೆ ಸಿನಿಮಾ ಲೋಕಕ್ಕೆ ಧುಮುಕಿದ ಬಸವರಾಜ್‌ಗೆ, ಅಲ್ಲಿ ಕೈಹಿಡಿದಿದ್ದು ಮೇಕಪ್‌ನ ಬ್ರಶ್ಶ್ಗಳು!
ಹಳ್ಳಿಯಿಂದ ಸಿನಿಮಾಕ್ಕೆ…: ಬಸವರಾಜ್‌ರ ಮೇಕಪ್ ವಿದ್ಯೆಯ ಹಿಂದೆ, ಗ್ರಾಮೀಣ ಸಂಸ್ಕೃತಿಯ ಪ್ರೇರಣೆಯಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವ, ಜಾತ್ರೆಗಳೇ ಇವರಿಗೆ ಸ್ಫೂರ್ತಿ ಆಗಿದ್ದವಂತೆ. ಈ ವೇಳೆ ಆಡುತ್ತಿದ್ದ ನಾಟಕ, ಅಲ್ಲಿ ಮಾಡುತ್ತಿದ್ದ ಮೇಕಪ್ ಕಲೆ ಇವರನ್ನು, ಸಿನಿಮಾ ಹಾಗೂ ಕಿರುತೆರೆ ಜಗತ್ತಿಗೆ ತಂದು ನಿಲ್ಲಿಸಿತು. ಹಳ್ಳಿಯಲ್ಲಿದ್ದಾಗ ಇವರು ತಮ್ಮ ಪಾತ್ರಗಳಿಗೆ ತಾವೇ ಮೇಕಪ್ ಮಾಡಿಕೊಂಡು, ಸ್ಥಳೀಯ ಪ್ರೇಕ್ಷಕರ ಮನಗೆದ್ದಿದ್ದರು.
ಮಿಂಚುವ ಕಲಾವಿದರ ಹಿಂದೆ…: ಬಸವರಾಜ ಹುಬ್ಬಳ್ಳಿ ಅವರು ಸುಮಾರು 13 ಮೆಗಾ ಧಾರಾವಾಹಿಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲಿ “ಸತ್ಯಂ ಶಿವಂ ಸುಂದರಂ’, “ಜೋ ಜೋ ಲಾಲಿ’ ಹಾಗೂ “ಸುಂದರಿ’ ಧಾರಾವಾಹಿಗಳು ಪ್ರಮುಖ. “ಸಮಯದ ಹಿಂದೆ ಸವಾರಿ’, “ಅನುಷ್ಕಾ’ ಹಾಗೂ “100% ಲಕ್’ ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಖ್ಯಾತ ಹಾಸ್ಯನಟ ಸಾಧು ಕೋಕಿಲ, ಹಿರಿಯ ನಟರಾದ ಶಿವರಾಮ್, ಉಮೇಶ್ ಸೇರಿದಂತೆ ಹಲವು ನಟರ ಮೊಗಕ್ಕೆ, ಮೇಕಪ್‌ನ ಕುಂಚವನ್ನು ಸ್ಪರ್ಶಿಸಿದ್ದಾರೆ.
ಹಳ್ಳಿಯಲ್ಲಿದ್ದಾಗ ನಾಟಕ ಆಡಲು ಹುರಿದುಂಬಿಸುತ್ತಿದ್ದ ಮಾಸ್ತರ್ ಮಲ್ಲಿಕಾರ್ಜುನ ಇಟ್ಟಂಗಿಮಠ ಗುರುಗಳ ಪ್ರೋತ್ಸಾಹವೇ, ಪ್ರಸಾಧನ ರಂಗದಲ್ಲಿ ಬೆಳೆಯುವಂತೆ ಮಾಡಿತು.
-ಬಸವರಾಜ್ ಹುಬ್ಬಳ್ಳಿ, ಮೇಕಪ್ ಆರ್ಟಿಸ್ಟ್
* ಪರಶುರಾಮ ಶಿವಶರಣ