Advertisement

ಬೀದಿನಾಯಿ ದಾಳಿಗೀಡಾದ ಬಾಲಕ ಸಾವು

11:58 AM Sep 02, 2018 | Team Udayavani |

ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್‌ ಶನಿವಾರ ಕೊನೆಯುಸಿರೆಳೆದಿದ್ದಾನೆ. ಕಳೆದೆರಡು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡಿದ ಪ್ರವೀಣ್‌, ಚಿಕಿತ್ಸೆ ಫ‌ಲಕಾರಿಯಾಗದೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಈ ಮೂಲಕ ಬೀದಿ ನಾಯಿಗಳ ಹಾವಳಿಗೆ ಇದು 62ನೇ ಬಲಿ ಇದಾಗಿದೆ. 

Advertisement

ವಿಭೂತಿಪುರದಲ್ಲಿ ಬುಧವಾರ ಸಂಜೆ ಆಟವಾಡುವಾಗ ಬಾಲಕ ಪ್ರವೀಣ್‌ನ ಮೇಲೆ ಸುಮಾರು ಹತ್ತು ನಾಯಿಗಳು ಒಮ್ಮೆಲೆ ದಾಳಿ ನಡಸಿದ್ದವು. ಬಾಲಕನ ಗಂಟಲಿಗೆ ಬಾಯಿ ಹಾಕಿದ್ದರಿಂದ ತೀವ್ರ ಗಾಯಗೊಂಡಿದ್ದನು. ಎರಡು ದಿನಗಳಿಂದ ಮಣಿಪಾಲ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾತ್ರಿ ಸಾವನ್ನಪ್ಪಿರುವುದನ್ನು ಎಚ್‌ಎಎಲ್‌ ಠಾಣೆ ಪೊಲೀಸರು ದೃಢಪಡಿಸಿದರು.

ಪ್ರವೀಣ್‌ ಸಾವಿನ ಬೆನ್ನಲ್ಲೇ ಪೋಷಕರ ಆಕ್ರಂದನ ಮುಗಿಲುಮುಟ್ಟಿತು. ಮಗನ ಶವದ ಮೇಲೆ ತಾಯಿ ಮುರುಗಮ್ಮ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುಂತಿತ್ತು. ಸ್ಥಳದಲ್ಲಿದ್ದವರ ಕಣ್ಣಲ್ಲೂ ನೀರು ಜಿನುಗಿತು. ಮೇಯರ್‌ ಸಂಪತ್‌ರಾಜ್‌ ಸ್ಥಳಕ್ಕೆ ಭೇಟಿ ನೀಡಿ, ಪ್ರವೀಣ್‌ ಸಾವಿಗೆ ಕಂಬನಿ ಮಿಡಿದರು. ಬಾಲಕನ ಪೋಷಕರು ಅದೇ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

2000ದಿಂದ ಈಚೆಗೆ ನಗರದಲ್ಲಿ 1.92 ಲಕ್ಷ ಜನರ ಮೇಲೆ ಬೀದಿ ನಾಯಿಗಳು ಹಲ್ಲೆ ನಡೆಸಿದ್ದು, ಅದರಲ್ಲಿ ಶೇ. 95ರಷ್ಟು ಮಂದಿಗೆ ನಾಯಿ ಕಚ್ಚಿದ ಬಗ್ಗೆ ವರದಿಯಾಗಿದೆ. ಈ ಪೈಕಿ 61 ಜನ ಸಾವನ್ನಪ್ಪಿದ್ದಾರೆ. ಈಗ ಪ್ರವೀಣ್‌ ಸಾವಿನ ಮೂಲಕ ಈ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಕಳೆದ ಐದಾರು ವರ್ಷಗಳಿಂದ ಬೀದಿನಾಯಿಗಳ ದಾಳಿಗೆ ಯಾವುದೇ ಬಲಿಯಾಗಿಲ್ಲ.

2009-10ರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿಯ ಜಂಟಿ ಆಯುಕ್ತ (ಪಶುಪಾಲನೆ) ಜಿ.ಆನಂದ್‌ ಸ್ಪಷ್ಟಪಡಿಸಿದರು. ಈ ಮಧ್ಯೆ ಬೀದಿ ನಾಯಿಗಳನ್ನು ಹಿಡಿದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪಾಲಿಕೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಮೂವರನ್ನು ಎಚ್‌ಎಎಲ್‌ ಪೊಲಿಸರು ಶುಕ್ರವಾರವೇ ಬಂಧಿಸಿದ್ದಾರೆ.

Advertisement

ಹಲವು ಬಾರಿ ನಾಯಿ ಹಾವಳಿಯ ಕುರಿತು ದೂರು ನೀಡಿದರೂ ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಹಾಗೂ ಪ್ರವೀಣ್‌ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಾಲಕನ ತಾಯಿ ಮುರುಗಮ್ಮ ಅವರು ಗುರುವಾರ ಪೊಲೀಸರಿಗೆ ದೂರು ನೀಡಿದ್ದರು. 

ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಘಟನೆ ನಡೆದಿದೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಹದೇವಪುರ ವಲಯದ ಪಶುಪಾಲನೆ ವಿಭಾಗದ ಸಹಾಯಕ ನಿರ್ದೇಶಕ ಡಾ.ಶ್ರೀರಾಮ್‌, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಅರುಣ್‌ ಮುತಾಲಿಕ್‌ ದೇಸಾಯಿ ಹಾಗೂ ಗುತ್ತಿಗೆದಾರ ರವಿಶಂಕರ್‌ ಎಂಬುವವರನ್ನು ಬಂಧಿಸಿದ್ದಾರೆ.

ಮಗು ಮೃತಪಟ್ಟ ಹಿನ್ನೆಲೆಯಲ್ಲಿ, ಈಗಾಗಲೇ ಬಂಧಿಸಲಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೋರ್ಟ್‌ ಅನುಮತಿ ಪಡೆದು ಹೆಚ್ಚುವರಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next