ಚಾಮರಾಜನಗರ: ಜಮೀನಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ಬಾಲಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಹರವೆ ಸಮೀಪದ ಕೇತಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ರೈತ ಮಹೇಶ್ ಎಂಬುವರ ಪುತ್ರ ಕೆ.ಎಂ. ಮನೋಜ್‌ಕುಮಾರ್ (12) ಎಂಬ ಬಾಲಕ ಮೃತಪಟ್ಟವನು. ಈತ ಹರವೆಯ ಚೆನ್ನಬಸವೇಶ್ವರ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಬುಧವಾರ ತಂದೆ ತಾಯಿ ಜೊತೆ ಈ ಬಾಲಕ ಜಮೀನಿಗೆ ಹೋಗಿದ್ದ. ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.
ಜಮೀನಿನಲ್ಲಿ ನಡೆದು ಹೋಗುತ್ತಿದ್ದಾಗ ಹಳೆಯ ಲೈನಿನ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಾಲಕನ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಹೇಶ್ ಅವರಿಗೆ ಇಬ್ಬರು ಪುತ್ರರಿದ್ದು, ಈತ ಕಿರಿಯ ಪುತ್ರ. ಸ್ಥಳಕ್ಕೆ ಎಇಇ ಪೀಟರ್, ಜೆಇ ಪ್ರವೀಣ್ ಭೇಟಿ ನೀಡಿದ್ದರು. ರೈತರು ಘಟನೆಯ ಬಗ್ಗೆ ಆಕೊ್ರೀಶ ವ್ಯಕ್ತಪಡಿಸಿ, ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿದರು. ಈ ಮಾರ್ಗದ ವಿದ್ಯುತ್ ತಂತಿಗಳು ಜೋತಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದೆವು. ಲೈನ್‌ಮೆನ್, ಜೆಇ ಗಮನಕ್ಕೂ ತಂದಿದ್ದೆವು. ಆದರೂ ಲೈನನ್ನು ದುರಸ್ತಿಪಡಿಸಲಿಲ್ಲ. ಹಾಗಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಸೆಸ್‌ಕ್ನಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸೆಸ್‌ಕ್ನಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಎಇಇ ತಿಳಿಸಿದರು. ರೈತ ಸಂಘದ ಮೂಡ್ನಾಕೂಡು ಮಹೇಶ್ ಮತ್ತಿತರರು ಲೈನ್‌ಮೆನ್ ಹಾಗೂ ಜೆಇಯಿಂದ ಹೆಚ್ಚುವರಿ ಪರಿಹಾರಕ್ಕೆ ಆಗ್ರಹಿಸಿದರು.