ಬೀದರ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಬಡವರ ಬಂಧು’ ಯೋಜನೆಗೆ ಸಿಎಂ ಕುಮಾರಸ್ವಾಮಿ 15 ದಿನಗಳಲ್ಲಿ ರಾಜ್ಯಾದ್ಯಂತ ಚಾಲನೆ ನೀಡಲಿದ್ದಾರೆ.
ಋಣಭಾರ ಪೀಡಿತ ಸಣ್ಣ ರೈತರು, ದುರ್ಬಲ ವರ್ಗದವರಿಗೆ ಲೇವಾದೇವಿಗಾರರು ನೀಡುತ್ತಿರುವ ಕಿರುಕುಳ ಹಾಗೂ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಸುಮಾರು 50 ಕೋಟಿಗೂ ಅ ಧಿಕ ಹಣ ಮೀಸಲಿಡಲಾಗುತ್ತಿದೆ. ಕನಿಷ್ಠ 50 ಸಾವಿರ ಬೀದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ ನೆರವು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಈ ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ 5 ಸಾವಿರ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ತಲಾ 3 ಸಾವಿರ ಹಾಗೂ 18 ಜಿಲ್ಲೆಯ ನಗರ ಪ್ರದೇಶಗಳಲ್ಲಿ ತಲಾ ಒಂದು ಸಾವಿರ ಬೀದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸುವ ಯೋಜನೆ ಇದೆ. 2ನೇ ಹಂತದಲ್ಲಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಿಗೂ ಈ ಯೋಜನೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.
ಬಡ್ಡಿ ರಹಿತ ಸಾಲ: ಬಡವರ ಬಂಧು ಯೋಜನೆಯಡಿ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸದ್ಯ 2 ಸಾವಿರದಿಂದ 10 ಸಾವಿರದ ವರೆಗೆ ಸಾಲ ನೀಡುವ ಯೋಜನೆ ಇದ್ದು, ವಿಶೇಷ ಪ್ರಕರಣಗಳನ್ನು ಪರಿಗಣಿಸಿ ಸಾಲದ ಮೊತ್ತ ಹೆಚ್ಚಿಸಲು ಅವಕಾಶವಿದೆ. ಸಾಲ ಪಡೆಯುವವರಿಂದ ಯಾವುದೇ ಖಾತ್ರಿ, ಅಡಮಾನ ಇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರವೇ ಖಾತ್ರಿ ನೀಡುವ ಮೂಲಕ ಬೀದಿ ಬದಿ ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡುವ ಉದ್ದೇಶ ಇದೆ. ಸಾಲ ನೀಡುವ ಬ್ಯಾಂಕ್‌ಗಳಿಗೆ ಸರ್ಕಾರವೇ ಪ್ರತಿ ವರ್ಷಕ್ಕೆ ಶೇ.10ರಷ್ಟು ಬಡ್ಡಿ ಭರಿಸಲಿದೆ.
ಮರುಪಾವತಿ: ವ್ಯಾಪಾರಿಗಳು ಒಂದು ದಿನಕ್ಕೂ ಸಾಲ ಪಡೆಯಬಹುದು. ಸಾಲದ ಹಣ ನೂರು ದಿನಗಳಲ್ಲಿ ಭರಿಸಲು ಅವಕಾಶ ನೀಡಲಾಗುತ್ತಿದೆ. 10 ಸಾವಿರ ಸಾಲ ಪಡೆದು ಪ್ರತಿದಿನ 100 ರೂ. ಪಾವತಿಸಲು ಅವಕಾಶವಿದೆ. ನೂರು ದಿನಗಳಲ್ಲಿ ಸಾಲ ಭರಿಸಿದ ನಂತರ ಮತ್ತೆ ಸಾಲ ಪಡೆಯಬಹುದಾಗಿದೆ. ಸದ್ಯ ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳನ್ನು ಬಿಬಿಎಂಪಿ ಗುರುತಿಸಿ ಗುರುತಿನ ಚೀಟಿ ನೀಡಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಬೀದಿ ವ್ಯಾಪಾರಿಗಳನ್ನು ಗುರುತಿಸುವ ಕಾರ್ಯ ನಡೆದಿಲ್ಲವೊ ಅಂತಹ ಕಡೆ ಶೀಘ್ರದಲ್ಲಿ ಬೀದಿ ವ್ಯಾಪಾರಿಗಳನ್ನು ಗುರುತಿಸುವಂತೆ ಅಧಿ ಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಮೊಬೈಲ್ ಸೇವೆ: ಬಡವರ ಬಂಧು ಸೇವೆಗೆ ವಿಶೇಷ ವಾಹನದ ವ್ಯವಸ್ಥೆ ಮಾಡಿ, ಮೊಬೈಲ್ ಸೇವೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬೀದಿ ವ್ಯಾಪಾರಿಗಳ ಸ್ಥಳಕ್ಕೆ ಹೋಗಿ ಸೇವೆ ನೀಡುವ ಯೋಜನೆ ಇದಾಗಿದ್ದು, ಪ್ರತಿಯೊಂದು ಜಿಲ್ಲೆಗೆ ಒಂದು ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಎಲ್ಲ ವ್ಯವಹಾರಗಳನ್ನು ಆ ಬ್ಯಾಂಕಿನವರೇ ನೋಡಿಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಯಿಂದ ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಡವರ ಬಂಧು ಯೋಜನೆ ಜಾರಿಗೆ ತರುತ್ತಿದ್ದು, 15 ದಿನಗಳಲ್ಲಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಬೀದಿ ವ್ಯಾಪಾರಿಗಳ ನೋವು ಅರಿತು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
– ಬಂಡೆಪ್ಪ ಖಾಶೆಂಪೂರ, ಸಹಕಾರ ಸಚಿವ
– ದುರ್ಯೋಧನ ಹೂಗಾರ