ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ನಾಪತ್ತೆ ಆಗಿದ್ದ ಸವಾರನ ಮೃತದೇಹ 3 ದಿನಗಳ ಬಳಿಕ ಪತ್ತೆಯಾಗಿದೆ.
ಬ್ಯಾಟರಾಯನಪುರ ನಿವಾಸಿ ಹೇಮಂತ ಕುಮಾರ್(28) ಮೃತ ಸವಾರ. 3 ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ 8.30ಕ್ಕೆ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್‌ಕುಮಾರ್, ಶುಕ್ರ ವಾರ ರಾತ್ರಿ 10.30ರಲ್ಲಿ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರ ಕಡೆ ತೆರಳುತ್ತಿದ್ದ. ಮಾರ್ಗ ಮಧ್ಯೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಹೇಮಂತ್ ಕುಮಾರ್, ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಬಳಿಕ ಆಯಾತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಬಿದ್ದಿದ್ದು, ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಆತ ಕೊಚ್ಚಿ ಹೋಗಿದ್ದ. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿತ್ತಾದರೂ ಸವಾರನ ಸುಳಿವು ಇರಲಿಲ್ಲ. ಹೀಗಾಗಿ ಜ್ಞಾನಭಾರತಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸವಾರ ಹೇಮಂತ್‌ಗಾಗಿ ಹುಡುಕಾಟ ಆರಂಭಿಸಿದ್ದರು.
ಮೃತದೇಹ ತೇಲಿದಾಗ ಪತ್ತೆ: ತಲೆ ಕೆಳಗಾಗಿ ರಾಜಕಾಲುವೆಗೆ ಬಿದ್ದಿದ್ದ ಪರಿಣಾಮ ದೇಹದ ಅರ್ಧದಷ್ಟು ಭಾಗ ಕೆಸರಿನಲ್ಲಿ ಹೂತುಕೊಂಡಿತ್ತು. ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಮೃತದೇಹ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಮೃತದೇಹ ನೀರಿನಲ್ಲಿ ತೇಲಿದ ಪರಿಣಾಮ ಪತ್ತೆಯಾಗಿದೆ. ಜ್ಞಾನಭಾರತಿ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.