ಬೋಡೋಗಳ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಯಂಥ ಅಂಶಗಳನ್ನೂ ಒಪ್ಪಂದ ಒಳಗೊಂಡಿದೆ. ಇದರ ಹೊರತಾಗಿ 3ವರ್ಷಗಳಲ್ಲಿ ಬೋಡೋ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 1500 ಕೋ. ರೂ. ಅನುದಾನವನ್ನು ಕೇಂದ್ರ ಸರಕಾರ ಒದಗಿಸಲಿದೆ.
ಅಸ್ಸಾಂನಲ್ಲಿ ಹಿಂಸಾತ್ಮಕ ಹೋರಾಟಗಳಿಗೆ ಕಾರಣವಾಗಿದ್ದ ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯ ಬೇಡಿಕೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರಕಾರ ಬಹುತೇಕ ಯಶಸ್ವಿಯಾಗಿದೆ. ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಮತ್ತು ಆಲ್ ಬೋಡೋ ಸ್ಟುಡೆಂಟ್ಸ್ ಯೂನಿಯನ್ ಸೇರಿದಂತೆ ಬೋಡೋ ಚಳವಳಿಯಲ್ಲಿ ಸಕ್ರಿಯವಾಗಿದ್ದ ಹಲವು ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ, ಅಸ್ಸಾಂ ಸರಕಾರ ನಡುವೆ ಏರ್ಪಟ್ಟ ಒಪ್ಪಂದ ಈ ನಿಟ್ಟಿನಲ್ಲಿ ಐತಿಹಾಸಿಕವಾದದ್ದು.
ಹೊಸ ಒಪ್ಪಂದದಲ್ಲಿ ಬೋಡೋಗಳ ಪ್ರಾಬಲ್ಯವಿರುವ ಪ್ರದೇಶಗಳನ್ನು ಒಗ್ಗೂಡಿಸಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಏರಿಯಾಸ್ ಡಿಸ್ಟ್ರಿಕ್ಟ್ ಅನ್ನು ಪುನಾರಚಿಸುವ ಮತ್ತು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‌ನ ವ್ಯಾಪ್ತಿ ಮತ್ತು ಅಧಿಕಾರವನ್ನು ಹಿಗ್ಗಿಸಿ ಅದರ ಕಾರ್ಯ ಶೈಲಿಯನ್ನು ಸುಸೂತ್ರಗೊಳಿಸುವ ಅಂಶಗಳಿವೆ. ಈ ಮೂಲಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದ ಬೋಡೋಗಳಿಗೆ ಹೆಚ್ಚು ಸ್ವಾಯತ್ತೆಯನ್ನು ನೀಡುವ ವಾಗ್ಧಾನ ಮಾಡಲಾಗಿದೆ. ಸಶಸ್ತ್ರ ಬೋಡೋ ಗುಂಪುಗಳಿಗೆ ಪುನರ್‌ವಸತಿ, ಬೋಡೋಗಳ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಯಂಥ ಇತರ ಕೆಲವು ಅಂಶಗಳನ್ನೂ ಒಪ್ಪಂದ ಒಳಗೊಂಡಿದೆ. ಇದರ ಹೊರತಾಗಿ ಮೂರು ವರ್ಷಗಳಲ್ಲಿ ಬೋಡೋ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 1500 ಕೋ. ರೂ. ಅನುದಾನವನ್ನು ಕೇಂದ್ರ ಸರಕಾರ ಒದಗಿಸಲಿದೆ. ಈ ಮೂಲಕ ಬೋಡೋಗಳ ರಾಜಕೀಯ,ಆರ್ಥಿಕ ಮತ್ತು ಸಾಂಸ್ಕೃತಿಕ ಬೇಡಿಕೆಗಳನ್ನು ಪುರಸ್ಕರಿಸಿದಂತಾಗಿದೆ.
1987ರಿಂದೀಚೆಗೆ ಬೋಡೋಗಳು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿದ್ದಾರೆ. ಹಿಂಸಾತ್ಮಕ ಚಳವಳಿಗೆ ಕನಿಷ್ಠ 4,000 ಮಂದಿ ಬಲಿಯಾಗಿದ್ದಾರೆ ಹಾಗೂ ವ್ಯಾಪಕವಾಗಿ ನಾಶನಷ್ಟಗಳು ಸಂಭವಿಸಿವೆ ಎಂದು ಸರಕಾರದ ವರದಿಗಳು ಹೇಳುತ್ತಿವೆ. ಬೋಡೋ ಸಂಘಟನೆಗಳು ಒಂದು ಹಂತದಲ್ಲಿ ಬೋಡೋಲ್ಯಾಂಡ್‌ನ್ನು ಭಾರತದಿಂದ ಬೇರ್ಪಡಿಸುವ ಬೇಡಿಕೆಯನ್ನು ಕೂಡಾ ಇಟ್ಟಿದ್ದವು. ಈ ಹಿಂದೆ ಬೋಡೋಲ್ಯಾಂಡ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ಒಪ್ಪಂದಗಳನ್ನು ಮಾಡಲಾಗಿದ್ದರೂ ಫಲಪ್ರದವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂರು ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಯನ್ನು ಬಗೆಹರಿಸಲು ಮೋದಿ ಸರಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸಬೇಕು.
ಇಷ್ಟೆಲ್ಲ ಧನಾತ್ಮಕ ಅಂಶಗಳ ನಡುವೆಯೂ ಬೋಡೋ ಪ್ರದೇಶಗಳಲ್ಲಿರುವ ಇತರ ಸಮುದಾಯಗಳ ಕುರಿತು ಒಪ್ಪಂದದಲ್ಲಿ ಯಾವ ಉಲ್ಲೇಖವೂ ಇಲ್ಲ. ಬೋಡೋಲ್ಯಾಂಡ್ ಟೆರಿಟೋರಿಯಲ್ ಏರಿಯಾ ಡಿಸ್ಟ್ರಿಕ್ಟ್ ಅನ್ನು ಪುನಾರಚಿಸಿದರೂ ಅಲ್ಲಿರುವ ನಿವಾಸಿಗಳ ವಾಸ್ತವ ಸ್ಥಿತಿಗತಿಯೇನೂ ಬದಲಾಗುವುದಿಲ್ಲ. ಡಿಸ್ಟ್ರಿಕ್ಟ್ ವ್ಯಾಪ್ತಿಗೊಳಪಡಲಿರುವ ಕೆಲವು ಪ್ರದೇಶಗಳಲ್ಲಿ ಇತರ ಸಮುದಾಯಗಳ ಜನಸಂಖ್ಯೆ ಅಧಿಕವಿದೆ. ಇದು ಹೊಸ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುವ ಸಾಧ್ಯತೆಯಿದೆ. 2008ರಲ್ಲಿ ಬೋಡೋಗಳು ಮತ್ತು ಬಂಗಾಳಿ ಮೂಲದ ಮುಸ್ಲಿಮರ ನಡುವೆ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ , ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಹೀಗಾಗಿ ಇನ್ನೊಂದು ಜನಾಂಗೀಯ ಸಂಘರ್ಷಕ್ಕೆ ಅವಕಾಶವಿರುವ ಈ ಅಂಶದತ್ತಲೂ ಒಪ್ಪಂದದಲ್ಲಿ ಗಮನಹರಿಸಬೇಕಿತ್ತು.
ಈಶಾನ್ಯ ಭಾರತದ ಈ ಮಾದರಿಯ ಎಲ್ಲ ಹೋರಾಟಗಳ ಮೂಲದಲ್ಲಿರುವುದು ಈ ಜನಾಂಗೀಯ ಭಿನ್ನತೆ. ಹೊಸ ಒಪ್ಪಂದದಲ್ಲಿ ಇದಕ್ಕೆ ಖಚಿತವಾದ ಪರಿಹಾರ ಸೂತ್ರವೊಂದನ್ನು ಕಂಡುಕೊಂಡಿದ್ದರೆ ಇದು ಇತರ ರಾಜ್ಯಗಳಿಗೂ ಮೇಲ್ಪಂಕ್ತಿಯಾಗಬಹುದಿತ್ತು.