Advertisement

ಬಂಟ್ವಾಳ: ಪ್ರವಾಸಿ ತಾಣವಾಗಿಸಲು ನೀಲ ನಕಾಶೆ ಸಿದ್ಧ

09:08 AM Sep 13, 2022 | Team Udayavani |

ಬಂಟ್ವಾಳ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಮೀಪದಲ್ಲೇ ಕಲ್ಕುಟ ಕೊಳದ ಬಳಿ ಕೆರೆ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವಾಗಿಸಲು ನೀಲನಕಾಶೆ ಸಿದ್ಧಗೊಂಡಿದೆ.

Advertisement

ಕೊಳದ ಬಳಿ ಕೆರೆಯು ಅಮೃತ ಸರೋವರ ಕಾರ್ಯಕ್ರಮದಡಿ ಅಭಿವೃದ್ಧಿಗೆ ಆಯ್ಕೆಗೊಂಡಿದೆ. ಅದನ್ನೇ ಮುಂದುವರಿಸಿ ಬಂಟ್ವಾಳ ತಾ.ಪಂ.ನ ಸಹಯೋಗದೊಂದಿಗೆ ಸುಮಾರು 3 ಕೋ. ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಕರಿಯಂಗಳ ಗ್ರಾ.ಪಂ. ಯೋಜನೆ ರೂಪಿಸಿದೆ.

ಬೇರೆ ಬೇರೆ ಅನುದಾನಗಳನ್ನು ಬಳಕೆ ಮಾಡಿ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ಪ್ರಯತ್ನಗಳು ನಡೆಯುತ್ತಿದೆ. ಅಮೃತ ಸರೋವರ ಯೋಜನೆಯಲ್ಲಿ ಈಗಾಗಲೇ ಕೆರೆ ಅಭಿವೃದ್ಧಿಯನ್ನು ಆರಂಭಿಸ ಲಾಗಿದೆ. ಕೆರೆಯ ಸುತ್ತಲೂ ಕಲ್ಲು ಹಾಸುವ ಕಾರ್ಯ, ಕೆರೆಗೆ ಹೊರಗಿನಿಂದ ನೀರು ಬರದಂತೆ ಡ್ರೈನೇಜ್‌ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದೆ.

ಕೊಳದ ಬಳಿ ಕೆರೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಬಂಟ್ವಾಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ಗ್ರಾ.ಪಂ.ನಿಯೋಗ ಅಭಿವೃದ್ಧಿಗೊಂಡಿರುವ ಕೆರೆಗಳ ವೀಕ್ಷಣೆಯನ್ನೂ ಮಾಡಿದೆ. 5 ಎಕ್ರೆಗೆ ವಿಸ್ತಾರ ಕೊಳದ ಬಳಿ ಕೆರೆ ಅಭಿವೃದ್ಧಿಗೆ ಸಿದ್ಧಪಡಿಸಲಾದ 3ಡಿ ನೀಲ ನಕಾಶೆಯು ಆಕರ್ಷಕವಾಗಿದ್ದು, ಅದರಂತೆ ಕಾಮಗಾರಿ ಅನುಷ್ಠಾನಗೊಂಡರೆ ಉತ್ತಮ ಪ್ರವಾಸಿ ತಾಣವಾಗಿ ಮೂಡಿಬರಲಿದೆ.

ಸುಮಾರು 7ರಿಂದ 8 ಎಕ್ರೆಯಲ್ಲಿ ಈ ಎಲ್ಲ ಕಾರ್ಯಗಳು ಅನುಷ್ಠಾನಗೊಳ್ಳಲಿದೆ. 5 ಎಕ್ರೆ ಪ್ರದೇಶಕ್ಕೆ ಕೆರೆಯೇ ವಿಸ್ತರಣೆಗೊಂಡಿದೆ. ನೀಲನಕಾಶೆಯಂತೆ ಕೆರೆಯ ಸುತ್ತಲೂ ಒಂದು ರಸ್ತೆ ಬರಲಿದೆ. ಉಳಿದಂತೆ ಕೆರೆಯ ಸುತ್ತಲೂ ವಾಕಿಂಗ್‌ ಟ್ರ್ಯಾಕ್, ಪಾರ್ಕಿಂಗ್‌ ಪ್ರದೇಶ, ಗಾರ್ಡನ್‌ ಏರಿಯಾವನ್ನೂ ಗುರುತಿಸಲಾಗಿದೆ. ಜತೆಗೆ ಬೋಟಿಂಗ್‌ ವ್ಯವಸ್ಥೆಯನ್ನೂ ಅನುಷ್ಠಾನಗೊಳಿಸುವ ಯೋಜನೆ ಇದೆ.

Advertisement

3 ಕೋ.ರೂ.ವೆಚ್ಚದಲ್ಲಿ ಕೆರೆ ಅಭಿವೃದ್ಧಿ

ಸುಮಾರು 3 ಕೋ.ರೂ.ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿರುವ ಕರಿಯಂಗಳ ಗ್ರಾ.ಪಂ.ವಿವಿಧ ಮೂಲಗಳಿಂದ ಅನುದಾನ ಸಂಗ್ರಹಕ್ಕೆ ಪ್ರಯತ್ನಿಸುತ್ತಿದೆ. ಅಮೃತ ಸರೋವರ ಯೋಜನೆಯ ಮೂಲಕ ಸುಮಾರು 39 ಲಕ್ಷ ರೂ. ನರೇಗಾ ಅನುದಾನ ಬಳಕೆಗೆ ಅವಕಾಶವಿದೆ. ಸಮಗ್ರ ಕೆರೆ ಅಭಿವೃದ್ಧಿ ಯೋಜನೆ ಮೂಲಕ 10 ಲಕ್ಷ ರೂ. ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಕೆರೆ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೂ ಮನವಿ ಸಲ್ಲಿಸುವುದಕ್ಕೆ ಸಿದ್ಧತೆ ನಡೆದಿದೆ.

ಜತೆಗೆ ಎಂಆರ್‌ಪಿಎಲ್‌, ಬ್ಯಾಂಕ್‌ ಆಫ್‌ ಬರೋಡದಿಂದ ಸಿಎಸ್‌ಆರ್‌ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಹೀಗೆ ಎಲ್ಲ ಅನುದಾನಗಳನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.

ಅನುದಾನಕ್ಕಾಗಿ ಪ್ರಯತ್ನ: ಕೊಳದ ಬಳಿ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ನೀಲ ನಕಾಶೆಯನ್ನು ಸಿದ್ಧಪಡಿಸಿ ಬೇರೆ ಬೇರೆ ರೀತಿಯ ಅನುದಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಅಮೃತ ಸರೋವರ ಯೋಜನೆಯಲ್ಲಿ ಕಾಮಗಾರಿ ಆರಂಭಗೊಂಡಿದೆ. ರಾಮಕೃಷ್ಣ ತಪೋವನದವರು ಸಹಕರಿಸುವ ಭರವಸೆ ನೀಡಿದ್ದಾರೆ. ಎಲ್ಲರ ಸಹಕಾರ ಪಡೆದು ಮಾದರಿಯಾಗಿ ಅಭಿವೃದ್ಧಿ ಪಡಿಸುವ ಯೋಚನೆ ಇದೆ. –ಚಂದ್ರಹಾಸ ಪಲ್ಲಿಪಾಡಿ, ಅಧ್ಯಕ್ಷರು, ಕರಿಯಂಗಳ ಗ್ರಾ.ಪಂ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next