ಗದಗ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವು ಹಾಗೂ ದೇಶಾದ್ಯಂತ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 300 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಗುರುವಾರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಇಲ್ಲಿನ ಪಾಲಾ ಬದಾಮಿ ರಸ್ತೆಯಲ್ಲಿರುವ ಸಂಸದರ ಸಂಪರ್ಕ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಸಂಸದ ಶಿವಕುಮಾರ ಉದಾಸಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪಕ್ಷ ಹಾಗೂ ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಿದರು. ಇದೇ ವೇಳೆ ಜೋಡು ಮಾರುತಿ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ ಸುಧೀರ ಖಾಟಿಗೇರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗುಲಾಲು ಎರಚಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಸತ್ತಲಿಮುತ್ತಲಿನ ನಿವಾಸಿಗಳ ಮನೆಗಳಿಗೆ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರನ್ನು ಗೆಲ್ಲಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಸುಧೀರ್ ಕಾಟಿಗೇರ್, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ ಐದು ವರ್ಷಗಳಲ್ಲಿ ನೀಡಿರುವ ಜನಪರ ಆಡಳಿತ ಜನರು ಮೆಚ್ಚಿದ್ದಾರೆ ಎಂಬುದಕ್ಕೆ ಈಗಿನ ಫಲಿತಾಂಶವೇ ಸಾಕ್ಷಿ. ಕಳೆದ ಬಾರಿಗಿಂತ ಪ್ರಚಂಡ ಬಹುಮತದೊಂದಿಗೆ ಮತ್ತೆ ಆಯ್ಕೆಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಮುನ್ನಡೆಸುವರು.
ದೇಶದ ಹಿತಕ್ಕಾಗಿ ಬಿಜೆಪಿ ಬೆಂಬಲಿಸಿದ ಕಾರ್ಯತರ್ಕರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು ಪ್ರಧಾನಿ ಮೋದಿ ಹಾಗೂ ಎರಡನೇ ಅವಧಿಗೆ ಆಯ್ಕೆಯಾಗಿದ್ದ ಉದಾಸಿ ಮಾಡಿರುವ ಅಭಿವೃದ್ಧಿ ಕಾರ್ಯ ಜನ ಮೆಚ್ಚಿ ಬೆಂಬಲಿಸಿದ್ದಾರೆ. ಅದರಂತೆ ಹಾವೇರಿ ಕ್ಷೇತ್ರದಲ್ಲಿ ಸುಮಾರು 1.40 ಲಕ್ಷ ಮತಗಳ ಅಂತರದಿಂದ ಉದಾಸಿ ಅವರನ್ನು ಗೆಲ್ಲಿಸಿದ್ದಾರೆ.
ರಾಮಣ್ಣ ಲಮಾಣಿ, ಶಾಸಕ, ಶಿರಹಟ್ಟಿ ಮೋದಿ ಅಲೆಯಲ್ಲಿ ನಮಗೆ ಸೋಲಾಗಿದೆ.
ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು? ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡುತ್ತೇವೆ. ಆದರೆ, ಜನರು ಕೊಟ್ಟ ತೀರ್ಪು ಸ್ವಾಗತಿಸುತ್ತೇವೆ.
ಗುರಣ್ಣ ಬಳಗಾನೂರ, ಗದಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಈ ಬಾರಿ ಚುನಾವಣೆಯಲ್ಲಿ ಡಿ.ಆರ್. ಪಾಟೀಲ ಅವರಿಗಿಂತ ಜನರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ. ಈ ಬಾರಿ ಸೋಲಿಗೆ ನಾನೇ ಹೊಣೆ ಎಂದು ಭಾವಿಸಿದ್ದೇನೆ. ಈ ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ.
ಸಚಿನ್ ಪಾಟೀಲ, ಕಾಂಗ್ರೆಸ್ ಯುವ ಮುಖಂಡ