Advertisement

ಅನುದಾನ ತಡೆ ಹಿಡಿದಿದ್ದು ಖಂಡನೀಯ: ಕಾಟ್ಕರ್‌

02:38 PM Jul 08, 2019 | Team Udayavani |

ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಾಹಿತಿ ಡಾ| ಸರಜೂ ಕಾಟ್ಕರ್‌ ಖಂಡಿಸಿದ್ದಾರೆ.

Advertisement

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 13ನೇ ವಾರ್ಷಿಕೋತ್ಸವ ನಿಮಿತ್ತ ರವಿವಾರ ನಡೆದ ಗಡಿನಾಡು ಸಾಹಿತ್ಯ, ಸಂಸ್ಕೃತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸಮಾಜದ ಸ್ವಾಸ್ಥ ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾರ್ಯ ಅನೇಕ ಸಂಘ-ಸಂಸ್ಥೆಗಳು, ಕಲಾವಿದರ ಮಾಡುತ್ತಿದ್ದಾರೆ. ಆದರೆ ಸರ್ಕಾರ ಯಾವುದೋ ನೆಪ ಇಟ್ಟುಕೊಂಡು ತಡೆಹಿಡಿದಿದ್ದು ಸರಿಯಲ್ಲ. ಅನುದಾನ ದುರ್ಬಳಕೆ ಮಾಡಿಕೊಂಡವರನ್ನು ಗುರುತಿಸಿ ಅಂಥವರ ಮೇಲೆ ಕೇಸು ದಾಖಲಿಸಬೇಕು. ಅದೆಲ್ಲವನ್ನು ಬಿಟ್ಟು ಎಲ್ಲ ಕನ್ನಡ ಕಾರ್ಯಕ್ರಮಗಳಿಗೆ ನೀಡುವ ಅನುದಾನವನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದು ಎಷ್ಟರ ಮಟ್ಟಿಗೆ ಸರಿ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ ಎಂದರು. ಶತಮಾನದ ಹಿಂದೆ ಸೇವೆಯಾಗಿ ಆರಂಭವಾಗಿದ್ದ ಭಾರತೀಯ ಪತ್ರಿಕಾ ರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ. ಕಾಲಘಟ್ಟದಲ್ಲಿ ಪತ್ರಕರ್ತರು ತಾವಾಗಿಯೇ ಕೆಲವೊಂದು ನೀತಿ ಸಂಹಿತೆ ರೂಪಿಸಿಕೊಂಡು ಮುನ್ನಡೆಯಬೇಕಾಗಿದೆ. ಪತ್ರಕರ್ತ ಮೊದಲು ತಾನು ಸ್ವಾಸ್ಥ್ಯ, ನೈತಿಕತೆ ಬೆಳೆಸಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇದು ಪೂರಕವಾಗಿದೆ. ಸಮಾಜಕ್ಕೆ ಏನು ಸುದ್ದಿ ಕೊಡುತ್ತಿದ್ದೇವೆ ಎಂಬುದರ ಬಗ್ಗೆಯೂ ಮೊದಲು ಪತ್ರಕರ್ತ ತಿಳಿದುಕೊಳ್ಳಬೇಕು ಎಂದರು.

ಹುಬ್ಬಳ್ಳಿ ಉದಯವಾಣಿ ಹಿರಿಯ ವರದಿಗಾರ ಅಮರೇಗೌಡ ಗೋನವಾರ ಮಾತನಾಡಿ, ಇಂದಿನ ದಿನಮಾನದಲ್ಲಿ ಸುದ್ದಿ ಮಾಡಲು ಮಾಹಿತಿಗಳ ಕೊರತೆ ಇಲ್ಲ. ಸಾಮಾಜಿಕ ಜಾಲತಾಣ, ವಿವಿಧ ವೆಬ್‌ಸೈಟ್‌ಗಳಿಂದ ಮಾಹಿತಿ ಪಡೆಯಬಹುದಾಗಿದೆ. ಆದರೆ ಓದುಗನಿಗೆ ವಿಶ್ವಾಸಾರ್ಹತೆಯ ಕೊರತೆ ಬಹಳಷ್ಟಿದೆ. ಯಾವುದು ಸತ್ಯ ಎಂಬುದನ್ನು ಅರಿಯಲು ಓದುಗ ಕಷ್ಟಪಡುತ್ತಿದ್ದಾನೆ. ಹೀಗಾಗಿ ಪತ್ರಕರ್ತ ಸಮಾಜದ ಸ್ವಾಸ್ಥ ್ಯ ಕಾಪಾಡುವುದರಲ್ಲಿ ಹಿಂದೆ ಬೀಳಬಾರದು ಎಂದರು.

ಪತ್ರಿಕಾ ರಂಗ ನಕರಾತ್ಮಕ ವರದಿಗಳಿಗಿಂತ ಸಕರಾತ್ಮಕ ವರದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆಧುನಿಕತೆ, ಕಾರ್ಪೋರೇಟ್‌ನ ವ್ಯಾಮೋಹ ಮತ್ತು ಅನಿವಾರ್ಯತೆಯ ನಡುವೆಯೂ ಪತ್ರಿಕಾ ರಂಗ ತನ್ನತನ ಉಳಿಸಿಕೊಳ್ಳಬೇಕಾಗಿದೆ ಎಂದರು.

ಟಿವಿ9 ಸುದ್ದಿ ವಾಹಿನಿ ನಿರೂಪಕ ಆನಂದ ಬುರಲಿ ಮಾತನಾಡಿ, ಟಿವಿ ವಾಹಿನಿಗಳಲ್ಲಿ ಅನೇಕ ಧನಾತ್ಮಕ ವಿಷಯಗಳು ಹಾಗೂ ಸಮಾಜಕ್ಕೆ ಪ್ರಗತಿಗಾಗಿ ಬೇಕಾಗುವ ಅಂಶಗಳು ಪ್ರಸಾರವಾಗುತ್ತಿವೆ. ಆದರೆ ಬೇರೆಯವರು ಅಂದುಕೊಂಡಷ್ಟು ಸುದ್ದಿ ವಾಹಿನಿಗಳು ಅಧೋಗತಿಗೆ ಇಳಿದಿಲ್ಲ. ಕೆಲವೊಂದು ವಿಷಯಗಳ ಬಗ್ಗೆ ಆತ್ಮ ವಿಮರ್ಶೆಗೆ ಮಾಡಬೇಕಾಗಿರುವುದು ನಿಜ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next