Advertisement
ಆರೋಪಿಗಳು ತುಂಗಾ ನದಿ ತಟವನ್ನೇ ತರಬೇತಿ ತಾಣ ಮಾಡಿಕೊಂಡಿದ್ದರು. ಗುರುಪುರದ ಹೊಳೆ ದಂಡೆ ಬಳಿ ಪೊದೆ ಹಾಗೂ ನಿರ್ಜನ ಪ್ರದೇಶದಲ್ಲಿ ಸ್ಫೋಟಕ ತಯಾರಿಸಿ ತುಂಗಾ ನದಿಗೆ ಎಸೆದು ಟ್ರಯಲ್ ಬ್ಲಾಸ್ಟ್ ಮಾಡುತ್ತಿದ್ದರು. ಕಡಿಮೆ ತೀವ್ರತೆಯ ಸ್ಫೋಟಕಗಳಾದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ. ಸವಳಂಗ ರಸ್ತೆಯ ಈಶ್ವರ ವನ ಬಳಿಯ ಖಾಲಿ ತಾಣದಲ್ಲೂ ಚಟುವಟಿಕೆ ನಡೆಸಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಆರೋಪಿಯ ಮೊಬೈಲ್, ಪರ್ಸ್ ಸಿಕ್ಕಿದೆ. ಮೊಬೈಲ್‌ನಲ್ಲಿ ಇನ್ನಷ್ಟು ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಪೊಲೀಸರು ಎರಡೂ ಪ್ರದೇಶಗಳಿಗೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ತುಂಗಾ ನದಿ ತಟದಲ್ಲಿ ತನಿಖೆ ವೇಳೆ ಸಿಕ್ಕಿರುವ ಚೂರುಗಳು ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ಅನುಮಾನ ಮೂಡಿಸಿವೆ. ಎಫ್‌ಐಆರ್‌ನಲ್ಲಿ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಂತೆ ಬಾಂಬ್ ತಯಾರಿಕೆ ಜಾಗದಲ್ಲಿ ಸುಟ್ಟಿರುವ ಗುರುತು ಇದೆ. ಬಾವುಟದ ಚೂರುಗಳು ಸಹ ದೊರೆತಿವೆ. ಈ ಬಗ್ಗೆ ವಿಡಿಯೋ ಕೂಡ ಇರಬಹುದು ಎನ್ನಲಾಗಿದ್ದು ಮೊಬೈಲ್ ತಪಾಸಣೆ ನಡೆಸಿದ ನಂತರ ಮಾಹಿತಿ ಹೊರಬರಲಿದೆ. ಇದೇ ವೇಳೆ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 11 ಕಡೆ ದಾಳಿ ನಡೆಸಿದ್ದು ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
Related Articles
ತುಂಗಾ ದಡದಲ್ಲಿ ಸಿಕ್ಕಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ಸ್ಫೋಟಕ ತಯಾರಿ ಕಲಿಕೆ ಹಂತದಲ್ಲಿದ್ದು ಇವರಿಗೆ ಬೇಕಾದ ಹಣದ ವ್ಯವಸ್ಥೆ ಮಾಡುತ್ತಿದ್ದವರು ಯಾರು ಎಂಬ ಸಂಶಯ ಮೂಡಿದೆ. ಮಾಹಿತಿ ಪ್ರಕಾರ ತಲೆ ಮರೆಸಿಕೊಂಡಿರುವ ಶಾರೀಖ್ ಆಗಾಗ್ಗೆ 2 ರಿಂದ 3 ಸಾವಿರ ಹಣ ಟ್ರಾನ್ಸ್ ಫರ್ ಮಾಡುತ್ತಿದ್ದ ಎನ್ನಲಾಗಿದ್ದು, ಶಾರೀಖ್‌ಗೆ ಬರುತ್ತಿದ್ದ ಹಣದ ಮೂಲ ಯಾವುದು ಎಂಬುದೂ ತಿಳಿಯಬೇಕಿದೆ. ಪೊಲೀಸರು ಬುಧವಾರ ಶಾರೀಖ್ ಮನೆಗೆ ತೆರಳಿ ಮೊಬೈಲ್, ಶಾಲಾ, ಕಾಲೇಜು ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಾರೀಖ್ ಆ.20ರಂದು ಅಂಗಡಿಗೆ ಬಟ್ಟೆ ತರುವುದಕ್ಕೆ ದೆಹಲಿಗೆ ಹೋಗಿದ್ದು ವಾಪಸ್ ಬಂದಿಲ್ಲ. ಮೊಬೈಲ್ ಕೂಡ ಸ್ವಿಚ್x ಆಫ್ ಇದೆ. ಆ.16ರಂದು ಜಬೀವುಲ್ಲಾ ಬಂಧನದ ನಂತರ ಎಸ್ಕೇಪ್ ಆಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.
Advertisement
ಮತೀನ್ ನಿಕಟವರ್ತಿಗಳೇ?ರಾಷ್ಟ್ರೀಯ ತನಿಖಾ ದಳದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ಮತೀನ್ ಜತೆ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತೀನ್ ತಲೆಮರೆಸಿಕೊಂಡು ಎರಡು ವರ್ಷಗಳಾಗಿದ್ದು ಎನ್‌ಐಎ ಈತನ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂ. ಬಹುಮಾನ ಘೋಷಿಸಿದೆ. ಮತೀನ್ ಸಹ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವನಾಗಿದ್ದು ನೇರವಾಗಿ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿದ್ದಾನೆ. ಈ ಹಿಂದೆ ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಸ್ಯಾಟ್‌ಲೈಟ್ ಫೋನ್ ಬಳಕೆ ಮಾಡಿದ್ದ. ಹೀಗಾಗಿ ಯುವಕರನ್ನು ಈತನೇ ಉಗ್ರ ಸಂಘಟನೆ ಜತೆ ಲಿಂಕ್ ಮಾಡಿರುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಯುಎಪಿಎ ಕೇಸ್ ತನಿಖೆ ಮುಂದುವರೆದಿದೆ. ಮಂಗಳೂರು, ಶಿವಮೊಗ್ಗದಲ್ಲಿ ದಾಳಿ ಮುಂದುವರಿದಿದೆ. ಕೆಲವೊಂದು ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಶಾರೀಖ್ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಲಾಗಿದೆ. ಇನ್ನೂ ಹಲವಾರು ಜನರ ತನಿಖೆ ನಡೆಸುವುದು ಬಾಕಿ ಇದೆ.
● ಬಿ.ಎಂ.ಲಕ್ಷ್ಮೀಪ್ರಸಾದ್, ಎಸ್‌ಪಿ