ಮುಂಡಗೋಡ: “ಕಂಬಳಿ ಬೀಸಿತು ಒಣಮರ ಚಿಗುರಿತಲೇ ಪರಾಕ್’ ಇದು ತಾಲೂಕಿನ ಚವಡಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ಈ ವರ್ಷದ ಕಾರಣಿಕ ನುಡಿ.
ಜಿಲ್ಲೆಯಲ್ಲಿಯೇ ಅತಿ ದೊಡ್ಡ ಆಲದ ಮರ ಎಂದು ಖ್ಯಾತಿ ಪಡೆದ ತಾಲೂಕಿನ ಚವಡಳ್ಳಿ ಹಾಗೂ ಕ್ಯಾಸನಕೇರಿ ಗ್ರಾಮಗಳ ಮಧ್ಯೆ ಇರುವ ಬೃಹದಾಕಾರದ ಆಲದ ಮರದ ಕೆಳಗೆ ಇರುವ ಶ್ರೀ ಮೈಲಾರಲಿಂಗೇಶ್ವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಅದ್ಧೂರಿಯಾಗಿ ನಡೆಯಿತು.
ಸೋಮವಾರ ರಾತ್ರಿ ಬಂಡಿ ಉತ್ಸವವು ಚವಡಳ್ಳಿ ಹಾಗೂ ಕ್ಯಾಸನಕೇರಿ ಗ್ರಾಮಗಳ ಭಜನೆ, ಜಾಂಜ್ ಮೇಳ, ಡೊಳ್ಳಿನ ಮಜಲು ಹಾಗೂ ಶಹನಾಹಿ ಇತ್ಯಾದಿ ವಾದ್ಯ ವೈಭವಗಳೊಂದಿಗೆ ಹೊರಟು ಏಳುಕೋಟಿ ಏಳುಕೋಟಿ… ಏಳುಕೋಟಿಗ್ಯೋ ಛಾಂಗಮಲೋ… ಎಂಬ ಘೋಷಣೆಯೊಂದಿಗೆ ಎರಡು ಗ್ರಾಮಗಳ ಮಧ್ಯವಿರುವ ಮೈಲಾರಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ಮಾಹಾಭಿಷೇಕ ಮಹಾಪೂಜೆ ನಡೆದಿದ್ದವು.
ಮಂಗಳವಾರ ಚವಡಳ್ಳಿ ಗ್ರಾಮದಲ್ಲಿ ಭಕ್ತರ ಜಯಘೋಷಗಳ ಮಧ್ಯೆ ಬಿಲ್ಲು ಏರಿದ ಗೊರವಪ್ಪ “ಕಂಬಳಿ ಬೀಸಿತು ಒಣಮರ ಚಿಗುರಿತಲೇ ಪರಾಕ್’ ಎಂದು ಕಾರಣಿಕ ನುಡಿದು ಕೆಳಕ್ಕೆ ಜಿಗಿದರು. ಈ ವರ್ಷ ಮಳೆ-ಬೆಳೆ ಚೆನ್ನಾಗಿದ್ದು ಒಳಮರ ಚಿಗುರುತ್ತದೆ ಎನ್ನುವುದು ಈ ಬಾರಿಯ ಕಾರಣಿಕದ ತಾತ್ಪರ್ಯ ಎಂದು ಜನ ವಿಶ್ಲೇಷಿಸಿದರು.
ಕಬ್ಬಿಣದ ಸರಪಳಿ ಹರಿದರು: ವಿಶೇಷ ಪೂಜೆ ನಂತರ ಗದ್ದುಗೆ ಎದುರು ಕಟ್ಟಲಾಗಿದ್ದ ಆರು ಕಬ್ಬಿಣದ ಸರಪಳಿಗಳನ್ನು ಏಳು ಕೋಟಿ, ಏಳು ಕೋಟಿ ಚಾಂಗಮಲೋ ಎನ್ನುತ್ತ ಕ್ಷಣಾರ್ಧದಲ್ಲಿ ಕೈಯಿಂದ ಸರಪಳಿ ತುಂಡರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಕರಿ ಕಂಬಳಿಯನ್ನು ಹೊದ್ದುಕೊಂಡು, ಕೈಯಲ್ಲಿ ಡಮರುಗ ಬಾರಿಸುತ್ತ, ಭಕ್ತರಿಗೆ ಹಳದಿ ಭಂಡಾರ ಹಚ್ಚುತ್ತಿರುವ ಗೊರವಯ್ಯನವರ ದಂಡು ಜನರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿತ್ತು. ಶಸ್ತ್ರಗಳನ್ನು ಹಾಕಿಸಿಕೊಂಡು ಭಕ್ತರು ದೇವರಿಗೆ ತಮ್ಮ ಹರಕೆ ಅರ್ಪಿಸಿದರು. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ತಾಲೂಕಿನ ಸುತ್ತ-ಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.