Advertisement

ಬರಲಿದೆ ಕಪ್ಪು ರಕ್ತದ ಖಡಕನಾತ ಕೋಳಿ ಫಾರಂ

11:27 AM Nov 18, 2017 | |

ಬೆಂಗಳೂರು: ರಕ್ತ, ಮಾಂಸ ಸೇರಿದಂತೆ ಪ್ರತಿಯೊಂದೂ ಕಪ್ಪು ಬಣ್ಣದಿಂದ ಕೂಡಿರುವ “ಖಡಕನಾತ’ ಕೋಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಕೇಂದ್ರ (ಸಿಪಿಡಿಒ)ವು ಖಡಕನಾತ ಕೋಳಿಯ ಫಾರಂ ತೆರೆಯಲು ಉದ್ದೇಶಿಸಿದೆ.

Advertisement

ರಾಜ್ಯದಲ್ಲಿ ಈ ಖಡಕನಾತ ಕೋಳಿಯ ಯಾವುದೇ ಫಾರಂಗಳಿಲ್ಲ. ಮಧ್ಯಪ್ರದೇಶ ಮೂಲದ ಈ ಜಾತಿಯ ಕೋಳಿಗಳನ್ನು ಲ್ಲಿನ ಬೆರಳೆಣಿಕೆಯಷ್ಟು ಫಾರಂಗಳಲ್ಲಿ ಹೆಚ್ಚೆಂದರೆ ಮೂರ್‍ನಾಲ್ಕು ಕಾಣಬಹುದು. ಆದರೆ, ಇತ್ತೀಚೆಗೆ ರೈತರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಆದ್ದರಿಂದ ಸಿಪಿಡಿಒ ಕನಿಷ್ಠ ಸಾವಿರ ಖಡಕನಾತ ಕೋಳಿಗಳ ಫಾರಂ ಶೀಘ್ರದಲ್ಲೇ ಆರಂಭಿಸಿ, ರಾಜ್ಯದಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. 

ಈ ಸಂಬಂಧ ಈಗಾಗಲೇ ಕೇಂದ್ರ ಪಶುಸಂಗೋಪನಾ ಇಲಾಖೆಗೆ ಪತ್ರ ವ್ಯವಹಾರ ನಡೆದಿದೆ. ಇದಕ್ಕೆ ಕೇಂದ್ರದ ಅನುಮೋದನೆ ದೊರೆತು, ಹಣ ಮಂಜೂರಾಗಬೇಕು. ಮುಂಬೈನಲ್ಲಿರುವ ಸಿಪಿಡಿಒ ಕೇಂದ್ರದಿಂದ ಇಲ್ಲಿಗೆ ಖಡಕನಾತ ಕೋಳಿಗಳು ಪೂರೈಕೆ ಆಗಲಿವೆ.

ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಕೃಷಿ ಮೇಳದಲ್ಲಿ ಈ ವಿಶಿಷ್ಟ ಜಾತಿಯ ಕೋಳಿಗಳನ್ನು ಸ್ವತಃ ಹೆಸರಘಟ್ಟದ ಸಿಪಿಡಿಒ ಪ್ರದರ್ಶನಕ್ಕಿಡಲಿದೆ ಎಂದು ಕೇಂದ್ರದ ಉಪನಿರ್ದೇಶಕ ಡಾ.ಕೆ.ಎಸ್‌. ಪ್ರತಾಪ್‌ ಕುಮಾರ್‌ “ಉದಯವಾಣಿ’ಗೆ ತಿಳಿಸಿದರು. 

ಲೈಂಗಿಕ ಬಯಕೆ ವೃದ್ಧಿ?: “ಖಡಕನಾತ’ ಕೋಳಿಯಲ್ಲೇನೂ ವಿಶೇಷ ಗುಣಗಳಿಲ್ಲ. ಹಾಗೆನೋಡಿದರೆ, ಇತರೆ ಜಾತಿಯ ಕೋಳಿಗಳಿಗಿಂತ ಕಡಿಮೆ ಮೊಟ್ಟೆ ಕೊಡುತ್ತದೆ. ಮಾಂಸ (ಗಂಡು ಖಡಕನಾತ) 3.5 ಕೆಜಿ ತೂಗುತ್ತದೆ. ಆದರೆ, ಮೊಟ್ಟೆ ಹೊರತುಪಡಿಸಿ, ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಅದು ಭಿನ್ನ ಎನಿಸಿಕೊಳ್ಳುತ್ತದೆ.

Advertisement

ಅದಕ್ಕಿಂತ ಹೆಚ್ಚಾಗಿ ಈ ಕಪ್ಪು ಬಣ್ಣದ ಕೋಳಿ ಶುಭ ಸೂಚಕ ಹಾಗೂ ಲೈಂಗಿಕ ಬಯಕೆ ವೃದ್ಧಿ ಜತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಭಾವನೆ ಜನರಲ್ಲಿದೆ. ಇದಾವುದೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಸಿಡಿಪಿಒ ಉಪನಿರ್ದೇಶಕ ಡಾ.ಕೆ.ಎಸ್‌. ಪ್ರತಾಪ್‌ ಕುಮಾರ್‌ ವಿವರಿಸಿದರು. 

ವಿಚಿತ್ರವೆಂದರೆ ಬಿಹಾರದಲ್ಲಿ ಖಡಕನಾತ ಕೋಳಿಗಳಿವೆ. ಆದರೆ, ಅಲ್ಲಿ ಇದನ್ನು ಕೇಳ್ಳೋರಿಲ್ಲ. ಅದೇನೇ ಇರಲಿ, ಜನ ಹೆಚ್ಚಾಗಿ ಇದನ್ನು ಕೇಳುತ್ತಿರುವುದರಿಂದ ಪೂರೈಕೆ ಮಾಡಬೇಕಾಗಿದೆ. ಕನಿಷ್ಠ ಸಾವಿರ ಕೋಳಿಗಳನ್ನಾದರೂ  ತಂದು, ಇಲ್ಲಿ ಪರಿಚಯಿಸಲಾಗುತ್ತದೆ ಎಂದು ಅವರು ಹೇಳಿದರು. 

ಖಡಕನಾತ ಕೋಳಿಯು ಕಪ್ಪು ರಕ್ತ ಮತ್ತು ಕಪ್ಪು ಮಾಂಸವನ್ನು ಹೊಂದಿದೆ. ಇದನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇದೇ ಕಾರಣಕ್ಕೆ ಕಪ್ಪುರಕ್ತ ಹೊಂದಿರುವ ಕೋಳಿಗಳಿಗೆ ಬೇಡಿಕೆ ಇದೆ. ಇದು ಮೌಡ್ಯವಾದರೂ, ಜನ ಕೇಳುತ್ತಿರುವುದರಿಂದ ಪೂರೈಸಬೇಕಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮತ್ತೋರ್ವ ಅಧಿಕಾರಿ ತಿಳಿಸಿದರು.

ವರ್ಷಕ್ಕೆ 200 ಮೊಟ್ಟೆ ಕೊಡುವ ಕೋಳಿ ಅಭಿವೃದ್ಧಿ: ಇದಲ್ಲದೆ, ಹೆಚ್ಚು ಮೊಟ್ಟೆ ಕೊಡುವ ಹಿತ್ತಲಲ್ಲಿ ಸಾಕುವ “ಕಾವೇರಿ’ಯ ಸಾಮರ್ಥ್ಯ ವೃದ್ಧಿಸುವ ಸಂಶೋಧನೆಯಲ್ಲಿ ಸಿಪಿಡಿಒ ವಿಜ್ಞಾನಿಗಳು ತೊಡಗಿದ್ದು, ಶೀಘ್ರದಲ್ಲೇ ಕಾವೇರಿ ಕೋಳಿ ವಾರ್ಷಿಕ ಕನಿಷ್ಠ 200 ಮೊಟ್ಟೆಗಳನ್ನು ನೀಡಲಿದೆ. 

ಪ್ರಸ್ತುತ 150ರಿಂದ 160 ಮೊಟ್ಟೆಗಳನ್ನು ಈ ಜಾತಿಯ ಕೋಳಿ ನೀಡುತ್ತಿದೆ. ಇದರ ಸಾಮರ್ಥ್ಯವನ್ನು ಈಗ ಕನಿಷ್ಠ 200ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ. ಪ್ರಸ್ತುತ ಅತಿ ಹೆಚ್ಚು ಮೊಟ್ಟೆಗಳನ್ನು ನೀಡುವ ಕೋಳಿ ಸ್ವರ್ಣಧಾರ. ಇದು ವರ್ಷಕ್ಕೆ ಗರಿಷ್ಠ 200 ಮೊಟ್ಟೆಗಳನ್ನು ಕೊಡುತ್ತದೆ ಎಂದು ಸ್ವರ್ಣಧಾರ ಅಭಿವೃದ್ಧಿಪಡಿಸಿದ ಡಾ.ಪ್ರತಾಪ್‌ ಕುಮಾರ್‌ ತಿಳಿಸಿದರು. 

ಅಂದಹಾಗೆ, ಹಿತ್ತಲಲ್ಲಿ ಸಾಕುವ 17 ಜಾತಿಯ ಕೋಳಿಗಳು ದೇಶದಲ್ಲಿವೆ. ಇವೆಲ್ಲವೂ ಸರ್ಕಾರದಿಂದ ಪ್ರಮಾಣೀಕೃತಗೊಂಡವಾಗಿವೆ. ಆ ಪೈಕಿ ಗಿರಿರಾಜ, ವನರಾಜ, ಸ್ವರ್ಣಧಾರ ಮತ್ತು ಬಿಹಾರದ ಶಿಫ್ರಾ ತಳಿಗಳನ್ನು ಡಾ.ಪ್ರತಾಪ್‌ ಕುಮಾರ್‌ ಅಭಿವೃದ್ಧಿಪಡಿಸಿದ್ದಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next