Advertisement

“ಬಿಎಸ್‌ವೈ ಮುಂದಿನ ಸಿಎಂ’ಎಂಬ ಬಿಜೆಪಿ ಹೇಳಿಕೆಗೆ ಎಚ್‌ಡಿಕೆ ಲೇವಡಿ

10:02 AM May 15, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಬೆಳೆಯಲು ಯಡಿಯೂರಪ್ಪ ಕಾರಣ ಎಂದು ಹೇಳಿದ್ದ ಕೇಂದ್ರ ಸಚಿವ
ಡಿ.ವಿ.ಸದಾನಂದಗೌಡ ಸಹಿತ ಬಿಜೆಪಿ ನಾಯಕರು ಈಗ ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, 2013ರಲ್ಲಿ ಬೆಳಗಾವಿಯಲ್ಲಿ ಇದೇ ಸದಾನಂದಗೌಡರು ರಾಜ್ಯದಲ್ಲಿ ಭ್ರಷ್ಟಾಚಾರ ಬೆಳೆಯಲು ಯಡಿಯೂರಪ್ಪ ಕಾರಣ ಎಂದು ಬಹಿರಂಗವಾಗಿಯೇ ಹೇಳಿದ್ದರು. ಈಗ ಅದೇ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿಯವರಿಗೆ ಚಾರ್ಜ್‌ಶೀಟ್‌ ಪದದ ಬಗ್ಗೆ ಅತೀವ ವ್ಯಾಮೋಹ. ಹೀಗಾಗಿಯೇ ಪದೇಪದೆ ಚಾಜ್‌ìಶೀಟ್‌ ಬಿಡುಗಡೆ ಮಾಡುತ್ತಿದ್ದಾರೆ. ನಾವು ಯಾವುದೇ ಚಾರ್ಜ್‌ಶೀಟ್‌ ಬಿಡುಗಡೆ ಮಾಡಲ್ಲ. ರಾಜ್ಯ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇಬ್ಬರೂ ಆಡಳಿತ ನಡೆಸಿ ರಾಜ್ಯ ಲೂಟಿ ಮಾಡಿದವರೇ ಎಂದು ಆರೋಪಿಸಿದರು.

ಕುತೂಹಲ ಮೂಡಿಸಿದ ಮಾತುಕತೆ: ಎಚ್‌.ಡಿ. ಕುಮಾರಸ್ವಾಮಿ ಅವರು ಭಾನುವಾರ ಮಲ್ಲೇಶ್ವರಂನಲ್ಲಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪ್ರಕಾಶ್‌ ಅಯ್ಯಂಗಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಮೊದಲಿನಿಂದಲೂ ಆತ್ಮೀಯರಾಗಿರುವ ಪ್ರಕಾಶ್‌ರವರು ಹೊಸದಾಗಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಜೆಡಿಎಸ್‌ ಸೇರ್ಪಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಳಿದಂತೆ ಅವರು ತಮ್ಮ ಹಿತೈಷಿಗಳ ಜತೆ ಚರ್ಚಿಸಿ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

Advertisement

ಅದ್ಧೂರಿ ಹುಟ್ಟುಹಬ್ಬ ಆಚರಣೆ ಬೇಡ: ದೇವೇಗೌಡರ ಮನವಿ
ಬೆಂಗಳೂರು: ರಾಜ್ಯದಲ್ಲಿ ನಿರಂತರ ಬರ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಮೇ 18ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಆಚರಿಸಬಾರದು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡ ಹಾಗೂ ಶಾಸಕ ವೈ.ಎಸ್‌.ವಿ.ದತ್ತಾ, ಮೇ 18ಕ್ಕೆ ದೇವೇಗೌಡರು 84 ವರ್ಷ ಪೂರೈಸಿ 85ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನಾಡು-ನುಡಿ, ನೆಲ-ಜಲಕ್ಕೆ ಕಳೆದ ಐದು ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದಿರುವ ದೇವೇಗೌಡರು ರಾಜ್ಯದಲ್ಲಿ ಭೀಕರ ಬರಗಾಲ ಇರುವ ಹಿನ್ನೆಲೆಯಲ್ಲಿ ಸಂಭ್ರಮದ ಹುಟ್ಟುಹಬ್ಬ ಬೇಡ ಎಂದು ದೇವೇಗೌಡರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ, ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಮುನ್ನೋಟ ಸಂಸ್ಥೆ ಹಾಗೂ ಐಟಿ ಕನ್ನಡಿಗರ ಕೂಟದಿಂದ ಭಾರತೀಯ ವಿದ್ಯಾಭವನದಲ್ಲಿ ಮೇ 18 ರಂದು “ರಾಷ್ಟ್ರದ ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರಾದೇಶಿಕ ವ್ಯವಸ್ಥೆ’ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ದೇವೇಗೌಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಅದೇ ದಿನ ಕೋಲಾರದಲ್ಲಿ ಮತ್ತೂಂದು ಕಾರ್ಯಕ್ರಮ ನಡೆಯಲಿದ್ದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಂ.ಸಿ.ನಾಣಯ್ಯ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next