Advertisement

ಬಿಜೆಪಿ ಹುಟ್ಟಿನಿಂದಲೂ ರಾಮಮಂದಿರ ಕಟ್ಟುತ್ತೇವೆ ಎನ್ನುತ್ತಲೇ ಇದ್ದಾರೆ…

09:53 PM Apr 16, 2019 | Team Udayavani |

ಮೈಸೂರು: ಬಿಜೆಪಿ ಹುಟ್ಟಿದಾಗಿನಿಂದಲೂ ಆರ್ಟಿಕಲ್‌ 360 ರದ್ಧತಿ, ರಾಮಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಇದೇನು ಹೊಸದಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ರಾಮಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಆದರೆ, ರಥಯಾತ್ರೆ ಮಾಡಿ ಇಟ್ಟಿಗೆ, ಕಬ್ಬಿಣ, ಹಣ ಎಲ್ಲವನ್ನೂ ಸಂಗ್ರಹಿಸಿಕೊಂಡು ಹೋಗಿ,

ವಾಜಪೇಯಿಯವರು ಆರು ವರ್ಷ, ಮೋದಿ ಅವರು ಐದು ವರ್ಷ ಪ್ರಧಾನಿಯಾಗಿ ಏಕೆ ಕಟ್ಟಲಿಲ್ಲ? ಇವರನ್ನು ಜನ ನಂಬುತ್ತಾರಾ ಎಂದು ಪ್ರಶ್ನಿಸಿದರು. ಲೋಕಪಾಲರನ್ನು ಚುನಾವಣೆ ಘೋಷಣೆ 15 ದಿನ ಇರುವಾಗ ನೇಮಕ ಮಾಡುವವರು, ಐದು ವರ್ಷ ಸುಮ್ಮನಿದ್ದಿದ್ದು ಏಕೆ ಎಂದು ಪ್ರಶ್ನಿಸಿದರು.

ನೈತಿಕತೆ ಇಲ್ಲ: ಈಗ ಚೌಕಿದಾರ್‌ ಎಂದು ಹೇಳಿಕೊಳ್ಳುತ್ತಿರುವ ಮೋದಿ, ಬಡವರು, ದಲಿತರು, ಯುವಕರನ್ನು ಕಾಯಲಿಲ್ಲ. ಹೀಗಾಗಿ ಅವರಿಗೆ ನಾನು ಚೌಕಿದಾರ್‌ ಎಂದು ಹೇಳಿಕೊಳ್ಳಲು ನೈತಿಕತೆ ಇಲ್ಲ ಎಂದು ಟೀಕಿಸಿದರು.

ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.,ಹಣ ಹಾಕುವುದಾಗಿ ಹೇಳಿದ್ದನ್ನು ಅಮಿತ್‌ ಶಾ, ಪ್ರಚಾರಕ್ಕೆ ಹೇಳಿದ್ದಾಗಿ ಹೇಳುತ್ತಾರೆ. ರೈತರ ಸಾಲಮನ್ನಾ ಮಾಡಲಿಲ್ಲ, ಗೊಬ್ಬರ ಬೆಲೆ ಕಡಿಮೆ ಆಗಲಿಲ್ಲ, ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಿಲ್ಲ,

Advertisement

2014ರಿಂದ 2018ರ ಅವಧಿಯಲ್ಲಿ ಅಗತ್ಯವಸ್ತುಗಳ ಬೆಲೆ ಶೇ.7 ರಿಂದ 75 ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದರೂ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಅಡುಗೆ ಅನಿಲ ಸಿಲಿಂಡರ್‌ ಬೆಲೆ 900 ರೂ. ಆಗಿದೆ. ದೇಶದ ಜನತೆಗೆ ನಿಮ್ಮ ಅಚ್ಚೇ ದಿನ್‌ ಎಲ್ಲಿ ಬಂತು ಎಂದು ಪ್ರಶ್ನಿಸಿದರು.

ವಿವರಣೆ ನೀಡಿಲ್ಲ: ಕಪ್ಪುಹಣ ಹೊರತೆಗೆಯಲು ನೋಟು ರದ್ಧತಿ ಮಾಡಿದ್ದಾಗಿ ಹೇಳುತ್ತಾರೆ. ಶೇ.99.9 ನೋಟು ವಾಪಸ್‌ ಬಂದ ಮೇಲೆ ಕಪ್ಪುಹಣ ಎಲ್ಲಿಂದ ಬಂತು? ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಈವರೆಗೆ ವಿವರಣೆ ಕೊಡುತ್ತಿಲ್ಲ,

ನೋಟು ರದ್ಧತಿ ಇಂಪ್ಯಾಕ್ಟ್ ಎಲ್ಲೂ ಕಾಣುತ್ತಿಲ್ಲ ಎಂದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ 5 ವರ್ಷ ತಮ್ಮದೇ ಸರ್ಕಾರವಿದ್ದರೂ ಮಹಿಳಾ ಮೀಸಲಾತಿ ಮಸೂದೆಯನ್ನೇಕೆ ತರಲಿಲ್ಲ ಎಂದು ಪ್ರಶ್ನಿಸಿದರು.

ಸೇನೆ ರಾಜಕೀಯಕ್ಕಲ್ಲ: ಪುಲ್ವಾಮಾ ದಾಳಿ ಸರ್ಕಾರದ ಗುಪ್ತಚರ ವೈಫ‌ಲ್ಯ ಅದನ್ನೇಕೆ ಹೇಳುತ್ತಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ನ ಕ್ರೆಡಿಟ್‌ ಭಾರತೀಯ ಸೇನೆಗೆ ಸಲ್ಲಬೇಕು. ಮೋದಿ ಗನ್‌ ಹಿಡಿದುಕೊಂಡು ವಿಮಾನದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಲು ಹೋಗಿರಲಿಲ್ಲ,

ಹಿಂದೆಯೂ 12 ಸರ್ಜಿಕಲ್‌ ಸ್ಟ್ರೈಕ್‌ ಆಗಿದೆ. ಪಾಕಿಸ್ತಾನದ ಮೇಲೆ 4 ಯುದ್ಧಗಳಾಗಿದೆ. ಈವರೆಗೆ ಲೋಕಸಭೆಗೆ 16 ಚುನಾವಣೆ ನಡೆದಿದೆ. ಆಗೆಲ್ಲಾ ಭಾರತೀಯ ಸೇನೆ ಇರಲಿಲ್ವಾ?ಹೀಗ್ಯಾಕೆ ಅದನ್ನು ಹೇಳುತ್ತಿದ್ದೀರಿ. ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ.

ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಜೈಜವಾನ್‌-ಜೈಕಿಸಾನ್‌ ಎಂದಾಗ ಮೋದಿ ಎಲ್ಲಿದ್ದರು. ಪಾಕಿಸ್ತಾನದ ಜೊತೆ ಮೊದಲ ಯುದ್ಧ ಆದಾಗ ಮೋದಿ ಹುಟ್ಟಿರಲೇ ಇಲ್ಲ. ಈಗ ಸರ್ಜಿಕಲ್‌ಸ್ಟ್ರೈಕ್‌ ನಾನೇ ಮಾಡಿದೆ. ನಾನೇ ದೇಶ ಭಕ್ತ ಎಂದು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಭಾರತದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಕಾಂಗ್ರೆಸ್‌ ದೇಶಭಕ್ತಿ ಹೆಸರಲ್ಲಿ ಗಾಂಧಿಯನ್ನು ಕೊಂದವರಿಂದ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳಬೇಕಾ ಎಂದು ಜರಿದರು.

5 ವರ್ಷದ ಸಾಧನೆ ಜನತೆ ಮುಂದಿಡಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷಗಳ ತಮ್ಮ ಸರ್ಕಾರದ ಸಾಧನೆ ಮತ್ತು ಮುನ್ನೋಟ ಹೇಳದೆ, ಭಾವನಾತ್ಮಕ ವಿಷಯಗಳನ್ನು ಮಾತ್ರ ಹೇಳುತ್ತಿದ್ದಾರೆ. ಸಿಎಂಯಾಗಿ ನನ್ನ ಸರ್ಕಾರದ 5 ವರ್ಷದ ಸಾಧನೆ ಜನರ ಮುಂದಿಡಲು ಸಿದ್ಧನಿದ್ದೇನೆ.

ನೀವು ಸಿದ್ಧರಿದ್ದೀರಾ. ಚುನಾವಣೆಗೆ ಹೋದಾಗ ಹಿಂದಿನ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ. ಇವರ ಮುನ್ನೋಟ ಏನು ಎಂದು ಜನ ಅಪೇಕ್ಷೆ ಪಡುತ್ತಾರೆ. ಆದರೆ, ಮೋದಿ ಈ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ. ಬದಲಿಗೆ ಹೊಸ ಬಾಟಲಿಯಲ್ಲಿ ಹಳೆ ವೈನ್‌ ತುಂಬಿರುವ ಬಿಜೆಪಿ ಪ್ರಣಾಳಿಕೆ ಬಗ್ಗೆ ಚರ್ಚಿಸುತ್ತಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next