ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ವಲಸಿಗರಿಗೆ ಟಿಕೆಟ್ ಘೋಷಣೆ ಆಗುತ್ತಲೇ ಬಿಜೆಪಿಯಲ್ಲಿ ಬಂಡಾಯದ ಕಹಳೆ ಜೋರಾಗಿದೆ. ಸದ್ದಿಲ್ಲದೇ ಬಿಜೆಪಿ ನಡೆಸಿದ ಸರ್ಜಿಕಲ್ ತಂತ್ರಕ್ಕೆ, ಜೆಡಿಎಸ್ ಆಪರೇಶನ್ ಬಿಜೆಪಿ ನಡೆಸಿ ರಾಜಕೀಯ ಪ್ರತಿತಂತ್ರ ಹೆಣದು ಸಫಲತೆ ಮೆರೆದಿದೆ. ಜಿಲ್ಲೆಯಲ್ಲಿ ಜೆಡಿಎಸ್ ವಲಸಿಗರಿಗೆ ಮಣೆ ಹಾಕಿದ ಬಿಜೆಪಿಗೆ ಜೆಡಿಎಸ್ ಕೂಡ ಪ್ರತಿ ತಂತ್ರವನ್ನೇ ಹೆಣೆದು ಬಿಜೆಪಿ ತೊರೆದವರಿಗೆ ಟಿಕೆಟ್ ನೀಡಿ ತಿರುಗೇಟು ನೀಡಿದೆ.
ಮತ್ತೂಂದೆಡೆ ಬಿಜೆಪಿ ಸೇರ್ಪಡೆ ಜೊತೆಗೆ ಎ.ಎಸ್. ಪಾಟೀಲ ನಡಹಳ್ಳಿ ಕಣ್ಣಿಟ್ಟಿರುವ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಇಬ್ಬರು ನಾಯಕರು ಜೆಡಿಸ್ ಸೇರಿ ಸ್ಪರ್ಧೆಗೆ ಅಣಿಯಾಗಿದ್ದಾರೆ. ಮತ್ತೂಂದು ಕ್ಷೇತ್ರದಲ್ಲಿ ಬಿಜೆಪಿಯ ಪ್ರಮುಖ ವಿಕೆಟ್ ಪತನಗೊಳಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಉಚ್ಛಾಟಿತ ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಗೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಘೋಷಣೆ ಆಗಿತ್ತು. ಆದರೂ ಅವರು ಸದ್ದಿಲ್ಲದೇ ಬಿಜೆಪಿ ಸೇರಿದರು. ಇದರ ಬೆನ್ನಹಿಂದೆಯೇ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜುಗೌಡ ಕುದರಿಸಾಲವಾಡಗಿ ಜೆಡಿಎಸ್ ಘೋಷಿತ ಅಭ್ಯರ್ಥಿಯಾಗಿದ್ದಾರೆ. ಇತ್ತ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಆಪ್ತ ಬಣದ ಮಂಗಳಾದೇವಿ ಬಿರಾದಾರ ಬುಧವಾರ ಹುಬ್ಬಳ್ಳಿಗೆ ತೆರಳಿ ಜೆಡಿಎಸ್ ಸೇರಿದ್ದಾರೆ. ಜೊತೆಗೆ ಮುದ್ದೇಬಿಹಾಳ ಕ್ಷೇತ್ರದಿಂದಲೇ ಜೆಡಿಎಸ್ ಅಭ್ಯರ್ಥಿ ಆಗುವುದು ಕೂಡ ಖಚಿತವಾಗಿದೆ. ಆ ಮೂಲಕ ಬಿಜೆಪಿ ಎರಡು ಪ್ರಮುಖ ವಿಕೆಟ್ ಪತನವಾಗಿವೆ. ವಿಧಾನಸಭೆ ಚುನಾವಣೆಯಾದ ಮೊದಲ ವಾರದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದವು.
ಅದರಲ್ಲಿ ಬಿಜೆಪಿ ಉಚ್ಛಾಟಿತ ಪಕ್ಷೇತರ ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನಗರ ಕ್ಷೇತ್ರಕ್ಕೆ ಹಾಗೂ ಮುದ್ದೇಬಿಹಾಳ ಕ್ಷೇತ್ರಕ್ಕೆ ಜೆಡಿಎಸ್ ತೊರೆದು ಬಂದಿರುವ ಕಾಂಗ್ರೆಸ್ ಉಚ್ಛಾಟಿತ ಶಾಸಕ ಎ.ಎಸ್. ಪಾಟೀಲ ಅವರಿಗೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಟಿಕೆಟ್ ಪ್ರಕಟಿಸಿದ್ದು ಸ್ಥಳೀಯ ನಾಯಕರಲ್ಲಿ ಬಂಡಾಯ ಏಳುವಂತೆ ಮಾಡಿದೆ.
ವಿಜಯಪುರ ನಗರ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಹೆಸರು ಘೋಷಣೆ ಆಗುತ್ತಲೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬಂಡಾಯ ಎದ್ದಿದ್ದಾರೆ. ಈಗಾಗಲೇ ಬಹಿರಂಗ ಬಂಡಾಯ ಸಾರಿ ಹಲವು ರೀತಿಯ ಪ್ರತಿಭಟನೆ ಮಾಡಿದ್ದಾರೆ. ಪಕ್ಷದ ಹಿತದಿಂದ ನಾನು ಪಕ್ಷ ತೊರೆಯುವುದಿಲ್ಲ ಎನ್ನುತ್ತಲೇ, ನನ್ನನ್ನು ನಂಬಿರುವ ಕಾರ್ಯಕರ್ತರ ರಾಜಕೀಯ ಭವಿಷ್ಯಕ್ಕಾಗಿ ಅವರ ನಿರ್ಧಾರದಂತೆ ನಡೆಯುತ್ತೇನೆ ಎನ್ನುವ ಮಾತೂ ಸೇರಿದ್ದಾರೆ.
ಇದರಿಂದ ಮೊದಲ ಪಟ್ಟಿಯಲ್ಲಿ ನಾಲ್ಕು ಟಿಕೆಟ್ ಘೋಷಿಸಿ ಬಿಜೆಪಿ ಈಗಾಗಲೇ ಮೂಲ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಇದೀಗ ವಿಜಯಪುರ ನಗರ ಕ್ಷೇತ್ರದಲ್ಲೂ ಮತ್ತೂಂದು ವಿಕೆಟ್ ಪತನ ಖಚಿತ ಎಂಬ ಮಾತು ಪಟ್ಟಣಶೆಟ್ಟಿ ಅವರ ಮಾತಿನಿಂದಲೇ ಸ್ಪಷ್ಟವಾಗಿದೆ.
ಜಿ.ಎಸ್. ಕಮತರ