ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, 25ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮೋದಿ ಸರ್ಕಾರ
ಮತ್ತೆ ಬಂದರೆ ಸಾಕಷ್ಟು ಸಮುದಾಯಗಳು ಮತ್ತು ವಿವಿಧ ಕ್ಷೇತ್ರಗಳಿಗೆ ನ್ಯಾಯ ಸಿಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ, ಯುವಕರು ಮತ್ತು ಮಹಿಳೆಯರಿಗೆ ಮತ್ತೂಮ್ಮೆ ಮೋದಿ ಸರ್ಕಾರ ಬೇಕಾಗಿದೆ ಎಂದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಗೊಂದಲವಿದೆ. ಉಭಯ ಪಕ್ಷಗಳ ಕಾರ್ಯಕರ್ತರಲ್ಲೇ ಗೊಂದಲ ಏರ್ಪಟ್ಟಿದೆ. ಜೆಡಿಎಸ್ ನೊಂದಿಗೆ ಇದೇ ಕೊನೆ ಮೈತ್ರಿ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ದೇವೇಗೌಡರು ಮೇಲ್ನೋಟಕ್ಕೆ ಒಂದಾಗಿದ್ದಾರೆ. ಆದರೆ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ. ರಾಹು ಕೇತು ಶನಿ ಇರೋದ್ರಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕ್ಷೇತ್ರದ
ಜನರ ವಿಶ್ವಾಸ ಗಳಿಸದೇ ಇರುವುದರಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ. ಯಾರು ರಾಹು ಕೇತು ಶನಿ ಎಂದು ಅವರಿಗೇ
ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಮೋದಿ ಪ್ರಧಾನಿ ಆಗಲ್ಲ, ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗಲ್ಲ ಎಂದು ಸಿದ್ದರಾಮಯ್ಯನವರು ದಿದ್ದರು. ಆದರೆ ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತದೆ. ಹಾಗಾಗಿ ಮೋದಿ ಮತ್ತೂಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಲ್ಲ. ಅಧಿಕಾರಿಗಳಿಗೆ ಹಣ ಹೊಡೆಯಿರಿ ಎಂದು
ಪ್ರಚೋದಿಸುತ್ತಾರೆ ಎಂದು ದೂರಿದರು. ಮೋದಿ ಮುಖ ನೋಡಿ ಮತ ಹಾಕಿ ಎಂದು ಅಭ್ಯರ್ಥಿಗಳು ಮತದಾರರನ್ನು ಕೇಳುತ್ತಿರುವ ಕುರಿತು ಪ್ರಶ್ನಿಸಿದಾಗ, ಭಾಗ್ಯವಂತರಿಗೆ ಸಿಗುವ ಮುಖ ಮೋದಿಯವರದು. ಅದು ನಮ್ಮ ತಂದೆ-ತಾಯಿ ಆಶೀರ್ವಾದ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ರಾಷ್ಟ್ರೀಯವಾದಿ. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿವಾದಿ ಪಕ್ಷಗಳು. ಜಾತಿವಾದಿ ಪಕ್ಷಗಳಿಂದ ಏನನ್ನೂ
ನಿರೀಕ್ಷಿಸಲು ಸಾಧ್ಯವಿಲ್ಲ. ಶಿವಮೊಗ್ಗದ ಜನ ನನ್ನನ್ನು 1.50 ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಪೆದ್ದ ಯಾರು, ದಡ್ಡ ಯಾರು
ಎಂದು ಜನರು ತೀರ್ಮಾನಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿ ಶಿವಮೊಗ್ಗದಲ್ಲಿ ನನ್ನನ್ನು
ಗೆಲ್ಲಿಸಿ ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದರೂ ಅಲ್ಲಿ ಏಕೆ ಸೋತರು ಎಂದು ತಿರುಗೇಟು
ನೀಡಿದರು.
ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಆದರೆ ಗೌಡರು ದೇಶ ಬಿಡಲಿಲ್ಲ. ಹಾಸನ ಕ್ಷೇತ್ರದಲ್ಲಿ ನಿಂಬೆಹಣ್ಣಿನ ಪ್ರಭಾವ ಬೀಳುತ್ತೆ. ಆದರೆ ನಿಂಬೆಹಣ್ಣು ನೋಡಿ ಜನ ಮತ ಹಾಕಲ್ಲ.
ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ.