Advertisement

ಪ್ರವಾಹ ಪರಿಹಾರ ತರದ ಬಿಜೆಪಿಯವರು ಪ್ರಚಾರ ಶೂರರು

09:56 PM Aug 30, 2019 | Team Udayavani |

ಹುಣಸೂರು: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಘೋಷಿಸಿರುವ 5 ಲಕ್ಷ ರೂ. ಸಾಲದಾಗಿದ್ದು, 10 ಲಕ್ಷ ರೂ.ಗೆ ಏರಿಸಬೇಕು. ಅರ್ಧಕ್ಕಿಂತ ಹೆಚ್ಚು ಮನೆ ಹಾನಿಯಾಗಿರುವವರಿಗೂ ಹೊಸ ಮನೆ ನಿರ್ಮಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಹಾನಿಗೊಳಗಾಗಿರುವ ತಾಲೂಕಿನ ಹನಗೋಡು ಅಣೆಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಅವರು, ಮುಖ್ಯನಾಲೆ ವೀಕ್ಷಿಸಿದ ನಂತರ ಕೋಣನಹೊಸಹಳ್ಳಿ, ಬಿಲ್ಲೇನಹೊಸಹಳ್ಳಿ ಮತ್ತಿತರ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ, ಪ್ರವಾಹದಿಂದ ಆಗಿರುವ ಅನಾಹುತ ವೀಕ್ಷಿಸಿ, ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಒಂದು ಲಕ್ಷ ಕುಟುಂಬಗಳು ಬೀದಿ ಪಾಲಾಗಿದ್ದು, ಆದರೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ, ಪ್ರಧಾನಿ ಭೇಟಿಯೂ ಇಲ್ಲ, ಮೂವರು ಕೇಂದ್ರ ಸಚಿವರು ಸೇರಿದಂತೆ 25 ಸಂಸದರಿದ್ದರೂ ನೆರೆ ಪರಿಹಾರ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಶುಂಠಿ, ತಂಬಾಕಿಗೂ ಪರಿಹಾರ ಕೊಡಿ: ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಶುಂಠಿ, ತಂಬಾಕು, ಮರಗೆಣಸು, ಹತ್ತಿ ನಷ್ಟ ಉಂಟಾಗಿದ್ದು, ಈ ಭಾಗದ ರೈತರು ಬೆಳೆಯುವ ಪ್ರಮುಖ ಬೆಳೆಗಳಾಗಿದ್ದು, ನಷ್ಟಕ್ಕೆ ತಕ್ಕಂತೆ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್‌ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಮತ್ತೆ ಎಲ್ಲವನ್ನು ಕ್ರೋಢೀಕರಿಸಿ ಪತ್ರ ಬರೆಯುತ್ತೇನೆಂದರು.

ನೆರೆ ಸಂಭವಿಸಿ ಮೂರು ವಾರ ಕಳೆದರೂ ರಾಜ್ಯ ಹಾಗೂ ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದರೂ ಇನ್ನೂ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರದ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ನೆರೆ ಹಾನಿಗೆ ಒಮ್ಮೆಲೆ 1,600 ಕೋಟಿ ರೂ.ಬಿಡುಗಡೆ ಮಾಡಿತ್ತು. ಈಗ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಿಸಲು ವಿಫಲರಾಗಿರುವ ಬಿಜೆಪಿಯವರು ಕೇವಲ ಪ್ರಚಾರ ಶೂರರೆಂದು ಜರಿದರು.

Advertisement

ರಾಷ್ಟ್ರೀಯ ವಿಪತ್ತೆಂದು ಘೋಷಿಸಿ: ರಾಜ್ಯದ ಬಹುತೇಕ ಕಡೆ ನೆರೆ ಹಾವಳಿಯಿಂದ ಲಕ್ಷ ಕುಟುಂಬಗಳು ಮನೆ-ಮಠ ಕಳೆದುಕೊಂಡಿವೆ. ಬೆಳೆ ಹಾನಿಯಾಗಿದೆ. ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಬೇಕೆಂದು ಒತ್ತಾಯಿಸಿದರು.

ಕೋಣನಹೊಸಹಳ್ಳಿ ಸ್ಥಳಾಂತರ: ನದಿ ಅಂಚಿನಲ್ಲಿರುವ ಕೋಣನಹೊಸಹಳ್ಳಿ ಗ್ರಾಮವನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅದರಂತೆ ಸೂಕ್ತ ಸ್ಥಳದಲ್ಲಿ ಕನಿಷ್ಠ 60*80 ಅಳತೆಯ ನಿವೇಶನ ನೀಡಿ, ಎಲ್ಲಾ ಸೌಲಭ್ಯ ಕಲ್ಪಿಸಿ, ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು, ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಶಾಸಕರಾದ ಅನಿಲ್‌ ಚಿಕ್ಕಮಾದು, ಧರ್ಮಸೇನಾ, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್‌, ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ಕಟ್ಟನಾಯಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ತಾಪಂ ಅಧ್ಯಕ್ಷೆ ಪದ್ಮಮ್ಮ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next