Advertisement

ಪ್ರಧಾನಿ ವಿರುದ್ಧ ಟೀಕೆಗೆ ತುಟಿ ಬಿಚ್ಚದ ಬಿಜೆಪಿ ನಾಯಕರು

06:00 AM Oct 30, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರುತ್ತಿದ್ದು, ಆರೋಪ- ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ತೀವ್ರ ಟೀಕೆ, ವಾಗ್ಧಾಳಿ ನಡೆಸುತ್ತಿದ್ದರೂ ಬಿಜೆಪಿ ರಾಜ್ಯ ನಾಯಕರು ತುಟಿ ಬಿಚ್ಚದಿರುವುದು ಪಕ್ಷದ ವಲಯದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಲೋಕಸಭಾ ಉಪಚುನಾವಣೆ ನಡೆದಿರುವ ಕ್ಷೇತ್ರಗಳಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್‌, ಜೆಡಿಎಸ್‌ನ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಆರೋಪ
ಮಾಡುವ ಜತೆಗೆ ಪ್ರಧಾನಿಯವರ ವಿರುದ್ಧ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಪ್ರತಿಹೇಳಿಕೆ ನೀಡದಿರುವುದು, ಪ್ರಧಾನಿ ಮೋದಿ ಅವರನ್ನು ಸಮರ್ಥಿಕೊಂಡು ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡದಿರುವುದು ಚರ್ಚೆಗೆ
ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಇತರೆ ಮುಖಂಡರು ಪ್ರಧಾನಿ ನರೇಂದ್ರ ಮೋದಿ ವಿರುದಟಛಿ ಕಠಿಣ ಶಬ್ಧಗಳನ್ನು ಬಳಸಿ ವ್ಯಂಗ್ಯಮಿಶ್ರಿತ ಮಾತುಗಳಿಂದ ವಾಗ್ಧಾಳಿ ನಡೆಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಅವರು ಭಾನುವಾರ ಬೆಂಗಳೂರು
ಸಾಹಿತ್ಯೋತ್ಸವದಲ್ಲಿ “ಪ್ರಧಾನಿ ಮೋದಿಯವರು ಶಿವಲಿಂಗದ ಮೇಲೆ ಕುಳಿತ ಚೇಳಿನಂತೆ’ ಎಂದು ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಭಾನುವಾರವೇ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಶಶಿ ತರೂರ್‌ ವಿರುದ್ಧ ಹರಿಹಾಯ್ದಿದ್ದರು.

ತುಟಿ ಬಿಚ್ಚದ ಪ್ರಮುಖ ನಾಯಕರು: ರಾಜ್ಯ ಬಿಜೆಪಿ  ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಪತ್ರಿಕಾ ಹೇಳಿಕೆ ನೀಡಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಮುಖ ನಾಯಕರು ಈ ಬಗ್ಗೆ ಚಕಾರ ಎತ್ತಿಲ್ಲ. ಕೇಂದ್ರ ಸಚಿವರಾಗಿರುವ ರಾಜ್ಯ ಸಂಸದರು ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ, ಪ್ರತಿರೋಧ ತೋರದಿರುವ ಬಗ್ಗೆ ಪಕ್ಷದ ಮಟ್ಟದಲ್ಲೇ ಅಸಮಾಧಾನವಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲೇ ಪ್ರತಿಪಕ್ಷಗಳು ಪ್ರಧಾನಿ ವಿರುದ್ಧ ಟೀಕೆ
ಮಾಡಿದರೂ ಅದಕ್ಕೆ ತಿರುಗೇಟು ನೀಡಲು ರಾಜ್ಯ ನಾಯಕರು ಹಿಂದೇಟು ಹಾಕುತ್ತಿರುವ ಬಗ್ಗೆ ಪಕ್ಷದಲ್ಲೇ ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸನ್ನು ಕಂಡು ಹತಾಶೆಗೊಂಡಿರುವ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ವಿನಾಕಾರಣ ಆರೋಪ, ಟೀಕೆ ಮಾಡುತ್ತಿದ್ದಾರೆ. ರಾಜಕೀಯ ಹಿನ್ನೆಲೆಯಿಲ್ಲದೆ ಸ್ವಂತ ಶ್ರಮದಿಂದ ಉನ್ನತ ಹುದ್ದೆಗೇರಿದ ಪ್ರಧಾನಿಯವರು ಇಂದಿಗೂ ಜನಪ್ರಿಯರಾಗಿದ್ದಾರೆ. ಇದನ್ನು ಕಾಂಗ್ರೆಸ್‌ ಸಹಿಸುತ್ತಿಲ್ಲ. ಮೋದಿಯವರ ಕೊಡುಗೆಗಳನ್ನು ಜನರಿಗೆ ತಿಳಿಸುತ್ತಾ ನಾವು ಮತ ಯಾಚಿಸುತ್ತೇವೆ.
● ಸಿ.ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

ಎಂ. ಕೀರ್ತಿಪ್ರಸಾದ್  

Advertisement

Udayavani is now on Telegram. Click here to join our channel and stay updated with the latest news.

Next