ಬೆಂಗಳೂರು: ಕೃಷಿ ಮತ್ತು ರೈತರ ಸಮಸ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದಿರುವ ಮುಖ್ಯಮಂತ್ರಿಗಳ ಹೇಳಿಕೆ ಹಾಗೂ ಭ್ರಷ್ಟಾಚಾರ ಈ ಮೂರು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರಕ್ಕೆ ಬಿಜೆಪಿ ನಿರ್ಧರಿಸಿದೆ.
ಇದಲ್ಲದೆ, ಪರಿಶಿಷ್ಟ ಜಾತಿ, ಪಂಗಡ, ಮೀನುಗಾರರು ಮುಂತಾದ ಸಮುದಾಯ ಆಧರಿತ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನೂ ಜನರಿಗೆ ತಿಳಿಸಲು ಮುಂದಾಗಿದ್ದು, ಅದಕ್ಕಾಗಿ ರಾಜ್ಯಾದ್ಯಂತ ಸಮುದಾಯಕ್ಕೆ ಸಂಬಂಧಿಸಿದ ಸಮಾವೇಶಗಳು, ಆಂದೋಲನಗಳನ್ನು ನಡೆಸಲೂ ತೀರ್ಮಾನಿಸಲಾಗಿದೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪ್ರಮುಖರ ಸಭೆಯಲ್ಲಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದ್ದು, ಫೆ. 4ರಂದು ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮುಗಿದ ತಕ್ಷಣದಿಂದಲೇ ಚುನಾವಣಾ ಪ್ರಚಾರ ಆರಂಭಿಸಲು ತೀರ್ಮಾನಿಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್, ಕೃಷಿ, ತೋಟಗಾರಿಕೆ ಸೇರಿದಂತೆ ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಶೇ. 40ರಷ್ಟು ಅನುದಾನ ಬಳಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರದ ಯೋಜನೆಯಾದ ಮಣ್ಣು ಆರೋಗ್ಯ ಕಾರ್ಡ್ ಗುರಿ ತಲುಪುವಲ್ಲಿ ವಿಫಲವಾಗಿದ್ದು, ಶೇ. 60ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಫಸಲ್ ಭಿಮಾ ಯೋಜನೆಯಡಿ ಮಹಾರಾಷ್ಟ್ರದಲ್ಲಿ 1.06 ಕೋಟಿ ರೈತರನ್ನು ನೋಂದಣಿ ಮಾಡಿದರೆ ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರದ ನಿರ್ಲಕ್ಷ್ಯದಿಂದ ಕೇವಲ 10.6 ಲಕ್ಷ ಜನ ಮಾತ್ರ ನೋಂದಣಿಯಾಗಿದ್ದಾರೆ. ಇದು ಸೇರಿದಂತೆ ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಚುನಾವಣಾ ಪ್ರಚಾರಕ್ಕೆ ಪ್ರಮುಖವಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳಾಗುತ್ತಿವೆ. ಇದನ್ನು ತಡೆಗಟ್ಟಲು
ವಿಫಲವಾಗಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯನ್ನು ಭಯೋತ್ಪಾಕ ಪಕ್ಷ ಎಂದು ಹೇಳುತ್ತಾರೆ. ಇದನ್ನೂ ಪ್ರಚಾರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು ಎಂದರು. ಹ್ಯೂಬ್ಲೋಟ್ ವಾಚ್ ಹಗರಣದಿಂದ ಹಿಡಿದು ಇಂಧನ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುವುದರ ಜತೆಗೆ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.