ಬೆಂಗಳೂರು: ಬಿಜೆಪಿಯವರು ನಪುಂಸಕರು. ನಾವು ಹುಟ್ಟಿಸಿದ ಮಕ್ಕಳನ್ನು ಕರೆದೊಯ್ದು ಬೀದಿಪಾಲು ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇಶದ ರಾಜಧಾನಿ ದಿಲ್ಲಿಯ ಬಾಗಿಲಲ್ಲಿ ರಾಜ್ಯದ ಮಾನ, ಮರ್ಯಾದೆ ಹರಾಜು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹುಟ್ಟಿಸಿದ ಮಕ್ಕಳನ್ನು ಬಿಜೆಪಿಯವರು ಕರೆದುಕೊಂಡು ಹೋದರು. ನಮ್ಮ 17ಮಂದಿ ಮಕ್ಕಳನ್ನು ಬೀದಿಪಾಲು ಮಾಡಿದರು. ಈಗ ನಮ್ಮ ಮಕ್ಕಳು ಅನರ್ಹಗೊಂಡ ಶಾಸಕರಾಗಿದ್ದಾರೆ ಎಂದು ಅನರ್ಹಗೊಂಡ ಶಾಸಕರಿಗೆ ಇಬ್ರಾಹಿಂ ಟಾಂಗ್ ನೀಡಿದರು.
ರಾಜ್ಯ ಬಿಜೆಪಿ ನಾಯಕರಿಗೆ ಸ್ವಾಭಿಮಾನವಿದ್ದರೆ ಕೇಂದ್ರ ಸರಕಾರದಿಂದ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ಹಣ ತರಲಿ. ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಕೇಂದ್ರ ಸರಕಾರದ ಬಳಿ ಪರಿಹಾರ ಕೊಡಲು ಹಣವೇ ಇಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಸಾಕಷ್ಟು ಏರಿಕೆಯಾಗಿದೆ. ರಾಜ್ಯದ 25 ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು. ಸಂಸದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಪೂಜೆ ಮಾಡಲಿ. ಆತನ ಪಾಲಿಗೆ ಮೋದಿಯೇ ದೇವರು. ಇಂಥ ಸಂಸದರಿಗೆ ಸೀರೆ ಕೊಡಲು ನಮ್ಮ ಬಳಿ ದುಡ್ಡಿಲ್ಲ. ಈ ಸಂಸದರನ್ನು ಎಲ್ಲಮ್ಮನ ಗುಡ್ಡಕ್ಕೆ ಕಳಿಸುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಹೆಸರಿಗಷ್ಟೇ ಯಡಿಯೂರಪ್ಪ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಅವರು ಹೆಸರಿಗಷ್ಟೇ ಮುಖ್ಯಮಂತ್ರಿ. ಒಬ್ಬ ಕನ್ನಡಿಗ ಮೇಯರ್‌ನನ್ನು ಆಯ್ಕೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಕೇಂದ್ರ ಸರಕಾರದಿಂದ 10,000 ಕೋ. ರೂ. ಪರಿಹಾರ ತರುವುದಕ್ಕೆ ಸಾಧ್ಯವಾಗಿಲ್ಲ. ಯಾರು ಏನೇ ಮಾಡಲಿ ಮೊದಲು ಕೇಂದ್ರ ಸರಕಾರದಿಂದ ಪರಿಹಾರ ತರಲಿ. ನೆರೆ ಸಂತ್ರಸ್ತರಿಗೆ ಬೇಕಿರುವುದು ಪರಿಹಾರವೇ ಹೊರತು ನಮ್ಮ ರಾಜಕೀಯವಲ್ಲ ಎಂದು ಹೇಳಿದರು.