Advertisement

ಬಿಜೆಪಿ ನಡೆ ಬಗ್ಗೆ ಪಕ್ಷದಲ್ಲೇ ಅಪಸ್ವರ

05:37 AM Feb 08, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ಬಿಜೆಪಿ ತೆರೆಮರೆಯಲ್ಲೇ ಕಸರತ್ತು ಮುಂದುವರಿಸಿದ್ದರೆ, ಪಕ್ಷದ ಈಚಿನ ನಡೆಗಳ ಬಗ್ಗೆ ಪಕ್ಷದ ಕೆಲ ಹಿರಿಯ ನಾಯಕರಲ್ಲೇ ಅಪಸ್ವರ ಕೇಳಿಬಂದಿದೆ. ಪಕ್ಷದ ಬಹುಪಾಲು ಶಾಸಕರಿಗೆ ಬಿಜೆಪಿ ಕಾರ್ಯತಂತ್ರಗಳ ಬಗ್ಗೆ ಮಾಹಿತಿಯನ್ನೇ ನೀಡದೆ ಆಯ್ದ ನಾಯಕರಷ್ಟೇ ಗೌಪ್ಯವಾಗಿ ಚರ್ಚಿಸಿ ನಿರ್ದೇಶನ ನೀಡುತ್ತಿರುವುದು ಸಹ ಹಿರಿಯ ಶಾಸಕರ ಬೇಸರಕ್ಕೆ ಕಾರಣವಾಗಿದೆ. ಆದರೆ ಪಕ್ಷದ ಪ್ರಯತ್ನಗಳಿಗೆ ಅಸಹಕಾರ ನೀಡಬಾರದು ಎಂಬ ಕಾರಣಕ್ಕೆ ಸಂಯಮ  ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಇವೆ. 

Advertisement

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಎಲ್ಲ ಪಕ್ಷಗಳು ಸಿದ್ಧತಾ ಕಾರ್ಯದಲ್ಲಿ ತೊಡಗಿವೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷದ ಸಿದ್ಧತೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂಬುದು ಹಿರಿಯ ನಾಯಕರು ಒಪ್ಪಿಕೊಳ್ಳುತ್ತಾರೆ. ರಾಜ್ಯ ಬಿಜೆಪಿಯ ಹಲವು ನಾಯಕರು ಮೈತ್ರಿ ಸರ್ಕಾರದ ಸಂಖ್ಯಾಬಲ ಕುಗ್ಗಿಸುವ ಪ್ರಯತ್ನದಲ್ಲೇ ನಿರತವಾಗಿರುವುದರಿಂದ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಕಾರ್ಯಕ್ಕೆ ಒತ್ತು ಸಿಗದಂತಾಗಿದೆ ಎಂದು ಮೂಲಗಳು ಹೇಳಿವೆ.

ಬದಲಾದ ಸಂದರ್ಭ, ಸನ್ನಿ ವೇಶಕ್ಕೆ ಅನುಗುಣವಾಗಿ ಕೆಲವೇ ನಾಯಕರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಬಹುತೇಕ ಶಾಸಕರಿಗೆ ಬಿಜೆಪಿಯ ಅಜೆಂಡಾ ಬಗ್ಗೆಯೇ ಮಾಹಿತಿಯಿಲ್ಲ. ಹಾಗಾಗಿ ಹಲವು ಹೊಸ ಶಾಸಕರು ಹಿರಿಯ ನಾಯಕರು, ಶಾಸಕರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. 

ಕೊನೆಯ ಕ್ಷಣದಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡುತ್ತಿರುವುದರಿಂದ ಪೂರ್ವ ಸಿದ್ಧತೆಯಿಲ್ಲದೆ ಕಾರ್ಯಪ್ರವೃತ್ತವಾಗುವಂತಾಗಿದೆ ಎಂಬ ಬೇಸರದ ಮಾತುಗಳು ಕೇಳಿಬಂದಿವೆ. ಇಷ್ಟಾದರೂ ಪಕ್ಷಕ್ಕೆ ಒಳಿತಾಗುವುದಾದರೆ ತಾತ್ಕಾಲಿಕ ಸಮಸ್ಯೆಗಳನ್ನು ಸಹಿಸಿಕೊಳ್ಳೋಣ ಎಂಬ ಭಾವನೆಯೊಂದಿಗೆ ಬಹಳಷ್ಟು ಶಾಸಕರು ಸುಮ್ಮನಿದ್ದಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಎಲ್ಲ ಗೊಂದಲಗಳಿಗೆ ತೆರೆ ಬಿದ್ದರೆ ಮುಂದೆ ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯದಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಹಲವರು ದಿನ ದೂಡುತ್ತಿದ್ದಾರೆ ಎಂದು ಹೇಳಲಾಗಿದೆ.

ನಮ್ಮದು ಮುಳ್ಳು ತಂತಿ ಮೇಲಿನ ನಡಿಗೆ
ಇಂಡಿ: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇರುವುದರಿಂದ ಒಡಂಬಡಿಕೆ ಆಡಳಿತ ನಡೆದಿದೆ. ಸ್ಥಳೀಯ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಇರುವ ಕಡೆ ಯಾವುದೇ ರೀತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ವರಿಷ್ಠರ ಕಟ್ಟಪ್ಪಣೆ ಮೇರೆಗೆ ರಾಜ್ಯದಲ್ಲಿ ಆಡಳಿತ ನಡೆಸಲಾಗುತ್ತಿದೆ. ನಮ್ಮ ಪರಿಸ್ಥಿತಿ ಮುಳ್ಳು ತಂತಿಯ ಮೇಲೆ ನಡೆದಂತೆ ಆಡಳಿತ ಮಾಡುತ್ತಿದ್ದೇವೆ ಎಂದು ತೋಟಗಾರಿಕೆ ಸಚಿವ ಎಂ.ಸಿ ಮನಗೂಳಿ ಹೇಳಿದರು.

Advertisement

ಫೆ.10ರಂದು ನಡೆಯಲಿರುವ ರಾಜ್ಯಮಟ್ಟದ ಎಸ್‌ಸಿ, ಎಸ್‌ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಇದೆ. ಇಂದು ಕಾಂಗ್ರೆಸ್‌ ಶಾಸಕರಿದ್ದ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಕೆಲಸ, ಕಾರ್ಯಗಳನ್ನು ನಾವು ಮಾಡುವಂತಿಲ್ಲ. ಆದರೆ ನಾವು 37 ಜನ ಜೆಡಿಎಸ್‌ ಶಾಸಕರನ್ನು ಕೂಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ನಮ್ಮ ಪರಿಸ್ಥಿತಿ ಮುಳ್ಳು ತಂತಿಯ ಮೇಲೆ ನಡೆದಂತೆ ಆಡಳಿತ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿಕೆಗಳು ನೀಡಿ ಹೋಗುವುದರಲ್ಲಿ ಅರ್ಥವಿಲ್ಲ. ನಿಮ್ಮ ಕೆಲಸ ಕಾರ್ಯಗಳು ಏನಾದರೂ ಇದ್ದರೆ ಮುಖ್ಯಮಂತ್ರಿಗಳ ಮುಖಾಂತರ ಕೆಲಸ ಮಾಡಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next